ಟಾಪ್ 4 ನ್ಯೂಸ್ ಚಿಕ್ಕಮಗಳೂರು
– ಚಿಕ್ಕಮಗಳೂರು: ಕಾಡಾನೆ ಕೊಂದು ದಂತ ಅಪಹರಣ ಪ್ರಕರಣ – ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಅಮಾನತು
– ಎಳನೀರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ
– ಮೂಡಿಗೆರೆ: ಹುಲಿ ದಾಳಿಗೆ ಹಸು ಬಲಿ
– ಚಿಕ್ಕಮಗಳೂರು: 6 ನಕ್ಸಲರ ಶರಣಾಗತಿಗೆ ಕ್ಷಣಗಣನೆ
ನಾಳೆಯೇ ನಡೆಯಲಿದೆಯೇ ಶರಣಾಗತಿ ಪ್ರಕ್ರಿಯೆ
NAMMUR EXPRESS NEWS
ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ ಹಿನ್ನೀರು ಪ್ರದೇಶವಾಗಿರುವ ಭೈರಾಪುರ ಅರಣ್ಯ ವಲಯದಲ್ಲಿ ಆನೆಯನ್ನು ಕೊಂದು ದಂತ ಅಪಹರಣ ಮಾಡಿರುವ ಪ್ರಕರಣದಲ್ಲಿ ಅರಣ್ಯ ಸಿಬ್ಬಂದಿಯೇ ಭಾಗಿಯಾಗಿರುವ ಆರೋಪದ ಮೇರೆಗೆ ಇಬ್ಬರು ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪ್ರಕರಣದ ತನಿಖೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಫಾರೆಸ್ಟ್ ಗಾರ್ಡ್ ದೇವರಾಜ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಕುಮಾರ್ ನಾಯಕ್ ಅವರನ್ನು ಅಮಾನತು ಮಾಡಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಅವರು ಆದೇಶಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಆನೆ ಕಳೇಬರ ಭದ್ರಾ ಹುಲಿ ಮೀಸಲು ಅರಣ್ಯದಲ್ಲಿ ಕಂಡುಬಂದಿದೆ. ಇದನ್ನು ಮೇಲಾಧಿಕಾರಿಗಳಿಗೆ ತಿಳಿಸದೇ ದಂತ ಕಳವು ಮಾಡಿರುವ ಸಾಧ್ಯತೆ ಇರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಆನೆ ಕಳೇಬರದ ಮರಣೋತ್ತರ ಪರೀಕ್ಷೆಯನ್ನು ಕಾಟಾಚಾರಕ್ಕೆ ಮಾಡಿಸಿ ಹೆಣ್ಣು ಆನೆ ಎಂದು ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ ಮಾಡಿದ ಆರೋಪವಿದೆ.
– ಎಳನೀರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ
ಎಳನೀರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗಲಿ 30 ಲಕ್ಷ ರೂ. ಗಿಂತ ಅಧಿಕ ನಷ್ಟ ಸಂಭವಿಸಿರುವ ಘಟನೆ ಮಲವಂತಿಗೆ ಗ್ರಾಮದ ಎಳನೀರು ಎಂಬಲ್ಲಿ ನಡೆದಿದೆ. ಪ್ರಶಾಂತ್ ವೈ. ಆರ್ ಅವರ ಮನೆಯಲ್ಲಿ ಘಟನೆ ಈ ನಡೆದಿದ್ದು, ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿದ್ದ ಸುಮಾರು 2 ಲಕ್ಷ ರೂ. ಮೊತ್ತದ ಅಡಕೆ, ಒಂದು ಲಕ್ಷ ರೂ ಮೌಲ್ಯದ ಕಾಫಿ ಬೀಜ, 50 ಸಾವಿರ ರೂ. ಮೊತ್ತದ ಕಾಳು ಮೆಣಸು, ಬಟ್ಟೆ ಬರೆ, ಪಾತ್ರೆ, ದಾಖಲೆ ಇತ್ಯಾದಿಗಳು ನಾಶವಾಗಿವೆ.ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದು, ಪ್ರಸ್ತುತ ಇವರಿಗೆ ನೆಲೆಸಲು ಮನೆ ಇಲ್ಲದಂತಾಗಿದೆ. ಸಹೋದರನ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಈ ಬಗ್ಗೆ ತಹಸೀಲ್ದಾರ್, ವಿಎ, ಪಿಡಿಒ ಇವರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಮಲವಂತಿಗೆ ಗ್ರಾಪಂ ಅಧ್ಯಕ್ಷ ಪ್ರಕಾಶ್ ಜೈನ್, ಕಳಸ ಮೆಸ್ಕಾಂ ಉಪ ವಿಭಾಗದ ಎಇ ಕೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
– ಮೂಡಿಗೆರೆ: ಹುಲಿ ದಾಳಿಗೆ ಹಸು ಬಲಿ
ಮೂಡಿಗೆರೆ: ತಾಲ್ಲೂಕಿನ ನಿಡುವಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರ್ಕಲ್ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಹಸು ನರೇಂದ್ರೇಗೌಡ ಎಂಬುವರಿಗೆ ಸೇರಿದ್ದು. ಮೇಯಲು ಹೋದ ಹಸು ಸಂಜೆಯಾದರೂ ಮನೆಗೆ ಬಾರದಿದ್ದನ್ನು ಕಂಡು, ಹುಡುಕಾಟ ನಡೆಸಿದಾಗ, ಕಾಫಿ ತೋಟದಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದೆ. ಹಸುವಿನ ದೇಹದ ಒಂದು ಭಾಗವನ್ನು ಹುಲಿ ತಿಂದು ಹಾಕಿದೆ. ಪಶು ವೈದ್ಯಾಧಿಕಾರಿ ಉದಯ್, ಅರಣ್ಯ ಅಧಿಕಾರಿ ಗಿರೀಶ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಮರ್ಕಲ್, ನಿಡುವಾಳೆ ಭಾಗದಲ್ಲಿ ಹುಲಿ ಸಂಚಾರದ ಬಗ್ಗೆ ಸ್ಥಳೀಯರಲ್ಲಿ ಆತಕ ಎದುರಾಗಿದೆ. ಕಾಫಿ ತೋಟಗಳಿಗೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಹುಲಿಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
– ಚಿಕ್ಕಮಗಳೂರು: 6 ನಕ್ಸಲರ ಶರಣಾಗತಿಗೆ ಕ್ಷಣಗಣನೆ ನಾಳೆಯೇ ನಡೆಯಲಿದೆಯೇ ಶರಣಾಗತಿ ಪ್ರಕ್ರಿಯೆ
ಚಿಕ್ಕಮಗಳೂರು: ನಕ್ಸಲ್ ನಾಯಕ ವಿಕ್ರಂಗೌಡನ ಎನ್ ಕೌಂಟರ್ ಬೆನ್ನಲ್ಲೇ ಕಾಫಿನಾಡ ಕಾಡಲ್ಲಿ ಆಲ್ ಮೋಸ್ಟ್ ನಕ್ಸಲರ ಯುಗಾಂತ್ಯವಾಗಿದೆ. ನಾಳೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ 6 ನಕ್ಸಲರ ಶರಣಾಗತಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ನಕ್ಸಲರು ಶರಣಾಗತಿ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯದ ಮಾಹಿತಿಗಳ ಪ್ರಕಾರ ಮಾಜಿ ನಕ್ಸಲ್ ನೂರ್ ಜುಲ್ಫಿಕರ್ ಶ್ರೀಧರ್ ನೇತೃತ್ವದಲ್ಲಿ ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿದಂತೆ ಪ್ರಮುಖರು ಶರಣಾಗಲಿದ್ದಾರೆ ಎಂದು ತಿಳಿದು ಬಂದಿದೆ. ವನಜಾಕ್ಷಿ, ಸುಂದರಿಣ ಮಾರೆಪ್ಪ, ವಸಂತ, ಜೀಶ್ ಶರಣಾಗಲಿರುವ ಇತರ ನಕ್ಸಲರು ಎಂದು ಹೇಳಲಾಗಿದೆ. ಸರ್ಕಾರ ರಚನೆ ಮಾಡಿರುವ ಜಿಲ್ಲಾ ಕಮಿಟಿ ಮುಂದೆ ಇವರು ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಶಾಂತಿಗಾಗಿ ನಾಗರೀಕ ವೇದಿಕೆಯ ಅಡಿಯಲ್ಲಿ ನಕ್ಸಲರು ಶರಣಾಗತಿ ನಡೆಯಲಿದೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್.ಪಿ.ವಿಕ್ರಮ ಅಮಟೆ ಮುಂದೆ ನಕ್ಸಲರು ಶರಣಾಗಲಿದ್ದಾರೆ ಎಂದು ತಿಳಿದು ಬಂದಿದೆ.