ಟಾಪ್ 5 ನ್ಯೂಸ್ ಚಿಕ್ಕಮಗಳೂರು
– ಮುಳ್ಳಯ್ಯನಗಿರಿಗೆ ತೆರಳಲು ಆನ್ಲೈನ್ ನೋಂದಣಿ ಕಡ್ಡಾಯ
– ಪ್ರವಾಸಿಗರೇ, ನೋಂದಣಿ ಮಾಡದಿದ್ರೆ ಪ್ರವೇಶ ಇಲ್ಲ: ಮುಂದಿನ ವಾರದಿಂದ ಜಾರಿ
– ತರೀಕೆರೆ: ಅಕ್ರಮ ಗೋದಾಮಿನ ಮೇಲೆ ದಾಳಿ, ಲಕ್ಷಾಂತರ ಮೊತ್ತದ ಕೀಟ ನಾಶಕ ಜಪ್ತಿ
– ಚಿಕ್ಕಮಗಳೂರು : ಮದ್ಯದ ಅಂಗಡಿ ಟಾರ್ಗೆಟ್: ಮೂವರು ಅರೆಸ್ಟ್!
– ಎನ್.ಆರ್.ಪುರ: ವಿಷ ಸೇವಿಸಿ, ಚಿಕಿತ್ಸೆ ಫಲಕಾರಿಯಾಗದೆ ಸಾವು
– ಎನ್.ಆರ್.ಪುರ: ಕಾಡಾನೆಗಳ ಕಾಟ: ಅಡಿಕೆ, ಬಾಳೆ ದ್ವಂಸ
NAMMUR EXPRESS NEWS
ಚಿಕ್ಕಮಗಳೂರು : ರಾಜ್ಯದ ಪ್ರಸಿದ್ದ ಪ್ರವಾಸಿತಾಣ ಮುಳ್ಳಯ್ಯನಗಿರಿಗೆ ತೆರಳುವ ಪ್ರವಾಸಿಗರು ಕಡ್ಡಾಯವಾಗಿ ಇನ್ನುಮುಂದೆ ಆನ್ಲೈನ್ ನಲ್ಲಿ ನೋಂದಣಿ ಮಾಡಬೇಕು. ಈ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಮುಂದಿನ ವಾರದಿಂದಲೇ ನಿಯಮ ಜಾರಿಗೆ ಬರಲಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸೇರಿದಂತೆ ಇಲ್ಲಿನ ಪ್ರವಾಸಿ ತಾಣಗಳಿಗೆ ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದ ಗಿರಿಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುತಿದ್ದು,ಪರಿಸರಕ್ಕೆ ಧಕ್ಕೆ ಉಂಟಾಗುತ್ತಿರುವ ಬಗ್ಗೆ ಪರಿಸರಾಸಕ್ತರು ಅಸಮಾಧಾನ ಹೊರ ಹಾಕುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆನ್ಲೈನ್ ಮೂಲಕ ನೋಂದಣಿ ಕಡ್ಡಾಯ ಮಾಡಿದೆ. ದಿನಕ್ಕೆ ನಿರ್ದಿಷ್ಟ ಸಂಖ್ಯೆಯ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲು ಮುಂದಾಗಿದೆ.
ದಿನಕ್ಕೆ 600 ವಾಹನಗಳಿಗೆ ಅವಕಾಶ
ಗಿರಿಭಾಗದಲ್ಲಿ ಜನ ಹಾಗೂ ವಾಹನ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ದಿನಕ್ಕೆ ಎರಡು ಸಮಯದಲ್ಲಿ 600 ವಾಹನಗಳಿಗೆ ಮಾತ್ರ ಗಿರಿಭಾಗಕ್ಕೆ ತೆರಳಲು ಅವಕಾಶ ಕಲ್ಪಿಸುವ ಯೋಜನೆ ರೂಪಿಸಿದೆ. ಬೆಳಗ್ಗೆ 9 ಗಂಟೆಗೆ 300 ವಾಹನ, ಮಧ್ಯಾಹ್ನ 2 ಗಂಟೆಗೆ 300 ವಾಹನಗಳಿಗೆ ಮಾತ್ರ ಅವಕಾಶ ನೀಡಲು ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾ ಯಿತಿ, ಪೊಲೀಸ್ ಇಲಾಖೆಯ ಸಭೆ ನಡೆಸಲಾಗಿದೆ.
– ತರೀಕೆರೆ: ಅಕ್ರಮ ಗೋದಾಮಿನ ಮೇಲೆ ದಾಳಿ: ಕೀಟ ನಾಶಕ ಜಪ್ತಿ
ತರೀಕೆರೆ : ಪಟ್ಟಣದ ಕುಂಭಾರ ಬೀದಿಯಲ್ಲಿರುವ ತೌಸೀಫ್ ಅಹಮದ್ ಎಂಬುವವರಿಗೆ ಸೇರಿದ ಲಕ್ಷಾಂತರ ಬೆಲೆಬಾಳುವ ಪರವನಾಗಿ ಇಲ್ಲದೆ ಅಕ್ರಮವಾಗಿ ಕೀಟನಾಶಕಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಜಂಟಿ ಕೃಷಿ, ನಿರ್ದೇಶಕರಾದ ಸುಜಾತ, ಹೆಚ್. ಎಲ್. ಇವರ ನೇತೃತ್ವದ ತಂಡ ದಾಳಿ ಮಾಡಿ ಶೋಧಕಾರ್ಯ ನಡೆಸಲಾಯಿತು. ಈ ಸಂಧರ್ಭದಲ್ಲಿ 06 ಕಂಪನಿಗಳಿಗೆ ಸೇರಿದ ಒಟ್ಟು 5 ಲಕ್ಷ 71 ಸಾವಿರ ಮೌಲ್ಯದ ಕೀಟನಾಶಕಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡುಬಂದಿದ್ದು, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಕೀಟನಾಶಕಗಳನ್ನು ಜಪ್ತಿ ಮಾಡಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲು ಕ್ರಮವಹಿಸಲಾಗಿದೆ. ದಾಳಿಯಲ್ಲಿ ಸಹಾಯಕ ಕೃಷಿ ನಿರ್ದೇಶಕರುಗಳಾದ ತಿಮ್ಮನಗೌಡ ಎಸ್ ಪಾಟೀಲ್, ಎಸ್ ವೆಂಕಟೇಶ ಚವ್ಹಾಣ್, ಕೃಷಿ ಅಧಿಕಾರಿ ಶ್ರೀನಿವಾಸ್ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.
– ಚಿಕ್ಕಮಗಳೂರು : ಎಣ್ಣೆ ಬಾಟಲಿ ಜೊತೆ ಮೂವರು ಬಂಧನ
ಚಿಕ್ಕಮಗಳೂರು: ತಾಲೂಕು ಮರ್ಲೆ ಗ್ರಾಮದಲ್ಲಿರುವ ಎಂ. ಎಸ್. ಐ. ಎಲ್. ಮದ್ಯದಂಗಡಿಯ ರೋಲಿಂಗ್ ಷಟರ್ ಬೀಗ ಮುರಿದು, ರೂ. 7.41 ಲಕ್ಷ ಹಣ ಮತ್ತು ಸಿಸಿ ಟಿವಿ ಡಿವಿಆರ್ ಕಳವು ಮಾಡಿದ್ದ ಪ್ರಕರಣದಲ್ಲಿ 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ ರೂ. 52 ಸಾವಿರ ನಗದು, ಮದ್ಯದ ಬಾಟಲಿಗಳು ಮತ್ತು ಕೃತ್ಯವೆಸಗಲು ಬಳಿಸಿದ್ದ ಉಪಕರಣ ಮತ್ತು ಕಾರು ವಶಪಡಿಸಿಕೊಂಡಿದ್ದು,ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಮದ್ಯದ ಅಂಗಡಿಗಳಲ್ಲಿ ಕಳವು ಮಾಡಿದ್ದಾರೆ.
– ಎನ್.ಆರ್.ಪುರ: ವಿಷ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಸಾವು
ಎನ್.ಆರ್.ಪುರ: ತಾಲೂಕಿನ ಮೆಣಸೂರು ಗ್ರಾಮದ ಬೈಪಾಸ್ ರಸ್ತೆ ವಾಸಿ ವಾಸು (60) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಾಸು ಅವರು ಜೂ.15 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು, ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕತ್ಸೆ ನೀಡಿ ನಂತರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಜೂ.25 ರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ವಾಸು ಮೃತಪಟ್ಟಿದ್ದಾರೆ. ಮೃತ ವಾಸು ಅವರು ಸುಮಾರು 4 ಲಕ್ಷ ರೂಪಾಯಿಯನ್ನು ಬ್ಯಾಂಕ್, ವಿವಿಧ ಸಂಘ ಸಂಸ್ಥೆಯಿಂದ, ಕೈ ಸಾಲ, ಕೃಷಿಗಾಗಿ ಸಾಲ ಪಡೆದುಕೊಂಡಿದ್ದರು. ಸಾಲ ತೀರಿಸಲಾಗದೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೆಂದು ವಾಸು ಅವರ ಪುತ್ರ ಅನಿಲ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
– ಎನ್.ಆರ್.ಪುರ: ಕಾಡಾನೆಗಳ ಕಾಟ: ಅಡಿಕೆ, ಬಾಳೆ ದ್ವಂಸ
ಎನ್.ಆರ್.ಪುರ: ತಾಲೂಕಿನ ಕಾನೂರು ಗ್ರಾಮದಲ್ಲಿ ಕಾಡಾನೆಗಳು ಕಾಟ ವಿಪರೀತವಾಗಿದ್ದು ಫಸಲು ಬರುತ್ತಿರುವ ಅಡಿಕೆ, ಬಾಳೆ ತೋಟಗಳನ್ನು ದ್ವಂಸ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ತೋಟಕ್ಕೆ ನುಗ್ಗಿದ ಕಾಡಾನೆಗಳು ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ಹಾಳು ಮಾಡಿದೆ. ರಾತ್ರಿ ಸಮಯದಲ್ಲಿ ತೋಟಗಳಿಗೆ ನುಗ್ಗುವ ಕಾಡಾನೆಗಳು ಹಗಲು ಸಮಯದಲ್ಲಿ ಸಮೀಪದ ಅಗಳಿ ಕಾಡಿಗೆ ಹೋಗಿ ಅಡಗಿ ಕುಳಿತುಕೊಳ್ಳುತ್ತದೆ. ಪ್ರಾಣ ಹಾನಿ ಆಗುವ ಮುನ್ನ ಅರಣ್ಯ ಇಲಾಖೆ ಯವರು ಎಚ್ಚೆತ್ತುಕೊಂಡು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.