ಮಲ್ನಾಡ್ ಟಾಪ್ 5 ನ್ಯೂಸ್
– ರೈಲಿಗೆ ತಲೆಕೊಟ್ಟು ಯುವತಿ ಸಾವು!
– ಲಂಚ ಸ್ವೀಕರಿಸುವ ವೇಳೆ ಸೊರಬ ಪುರಸಭೆ ರೆವಿನ್ಯೂ ಇನ್ಸ್ಪೆಕ್ಟರ್ ಬಲೆಗೆ
– ಚಿಕ್ಕಮಗಳೂರು: ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿ ಬಂಧನ
– ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ.!
– ಶಿವಮೊಗ್ಗ: ಹಾಡುಹಗಲೆ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನ.!
NAMMUR EXPRESS NEWS
ಸೊರಬ: ಪುರಸಭೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಕಂದಾಯ ನಿರೀಕ್ಷಕ ವಿನಾಯಕ ಅವರು ಲಂಚ ಸ್ವೀಕರಿಸುವ ವೇಳೆ ಬಲೆಗೆ ಬಿದ್ದಿದ್ದಾರೆ. ಹೊನ್ನಾವರದ ಪ್ರತಿಭಾ ಎಂ. ನಾಯ್ಕ ಎನ್ನುವವರು ನೀಡಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆದಿದ್ದು, ವಿನಾಯಕ ಅವರ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಏನಿದು ಪ್ರಕರಣ:
ಪ್ರತಿಭಾ ಅವರು ಹಳೇ ಸೊರಬ ವ್ಯಾಪ್ತಿಯ ಕಸಬಾ ಹೋಬಳಿಯಲ್ಲಿ ಖಾಲಿ ನಿವೇಶನ ಹೊಂದಿದ್ದು, ಇದು ಈ- ಸ್ವತ್ತಾಗಿದೆ. ಈ ಜಾಗವು ಗ್ರಾಮಪಂಚಾಯ್ತಿಯಿಂದ ಸೊರಬ ಪುರಸಭೆಗೆ ಸೇರಿದ್ದರಿಂದ ಪುರಸಭೆಗೆ ಸೇರಿಸಿ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಲಂಚ ಬೇಡಿಕೆ ಹಿನ್ನೆಲೆ ಪ್ರತಿಭಾ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ, ವಿನಾಯಕ ಅವರು ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಅವರನ್ನು ಬಂಧಿಸಿದೆ. ಆರೋಪಿಯಿಂದ 40 ಸಾವಿರ ರೂ. ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಾಗರದಲ್ಲಿ ರೈಲಿಗೆ ತಲೆಕೊಟ್ಟು ಯುವತಿ ಆತ್ಮಹತ್ಯೆ
ಸಾಗರ : ರೈಲಿಗೆ ತಲೆಕೊಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾತ್ರಿ 10:40ಕ್ಕೆ ಸಾಗರದಲ್ಲಿ ನಡೆದಿದೆ. ಮೈಸೂರ್ ತಾಳಗುಪ್ಪ ರೈಲಿಗೆ ಯುವತಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರದ ಅಪ್ರಾಪ್ತ ಯುವತಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯುವತಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿ ಅರೆಸ್ಟ್!
ಚಿಕ್ಕಮಗಳೂರು: ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಳಹೊಲಗದ್ದೆ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ ಕಾಫಿ ಗಿಡಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದಿದ್ದು, ಪಿ.ಎಸ್.ಐ, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಮತ್ತು ತಂಡ ಓರ್ವ ಆರೋಪಿಯನ್ನು ವಶಕ್ಕೆ ಪಡೆದು, 100 ಗ್ರಾಂ ಹಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಜಿಲ್ಲಾ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತಿಯ ಮೇಲೆ ಲೈಂಗಿಕ ದೌರ್ಜನ್ಯ: ಜೈಲು ಶಿಕ್ಷೆ!
ಶಿವಮೊಗ್ಗ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಶಿವಮೊಗ್ಗದ FTSC-1 ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ. 2021ನೇ ಸಾಲಿನಲ್ಲಿ ಸೊರಬ ತಾಲ್ಲೂಕಿನ ವಾಸಿ 35 ವರ್ಷದ ವ್ಯಕ್ತಿಯು 14 ರ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಈ ಬಗ್ಗೆ ನೊಂದ ಬಾಲಕಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿ, ಸಿಪಿಐ ರಾಜಶೇಖರ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹರಿಪ್ರಸಾದ್, ವಿಶೇಷ ಸರ್ಕಾರಿ ಅಭಿಯೋಜಕ ವಾದ ಮಂಡಿಸಿದ್ದು, ವಿಚಾರಣೆ ನಡೆದು, ಆರೋಪಿ ವಿರುದ್ಧ ಆರೋಪ ದೃಢ ಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧಿಶೆ ಲತಾ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 60,000/- ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 4 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದು ಮತ್ತು ದಂಡದ ಮೊತ್ತದಲ್ಲಿ 50,000 ರೂ ಹಾಗೂ ಸರ್ಕಾರದಿಂದ 4,00,000 ರೂ ಸೇರಿ ಒಟ್ಟು 4,50,000 ರೂ ಗಳನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.
ಹಾಡಹಗಲೇ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನ
ಶಿವಮೊಗ್ಗ: ಬಿಎಚ್ ನಗರದ ರಾಯಲ್ ಆರ್ಕೀಡ್ ಹೊಟೆಲ್ ನ ಹಿಂಭಾಗದ ರಸ್ತೆಯ ಅಂಬೇಡ್ಕರ್ ವೃತ್ತದ ಬಳಿ ಹಾಡಹಗಲೇ ಭರ್ಚಿಯಿಂದ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನಿಸಿದ ಘಟನೆ ಜರುಗಿದೆ. 48 ವರ್ಷದ ಕಾರ್ತಿಕ್ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಳಗಾದ ಯುವಕನನ್ನು ಕೂಡಲೇ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮಂಗಳವಾರ ಮದ್ಯಾಹ್ನ 12.30 ರ ಆಸುಪಾಸಿನಲ್ಲಿ ಈ ಘಟನೆ ನಡೆದಿದ್ದು, ಕಾರ್ತಿಕ್ ಎನ್ನುವ ವ್ಯಕ್ತಿಯು ಮನೆಗೆ ಹೋಗುತ್ತಿರುವು ಸಂದರ್ಭದಲ್ಲಿ ಹಿಂದಿನಿಂದ ಬಂದ ಇಬ್ಬರು ಅಪರಿಚಿರಲ್ಲಿ ಒಬ್ಬನು ಭರ್ಚಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.
ಈ ವೇಳೆ ಕಾರ್ತಿಕ್ ಭರ್ಚಿ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದ್ರೆ, ಭರ್ಚಿ ಕೊನೆಗೂ ಆತನ ಕೈ ಭಾಗಕ್ಕೆ ತಗುಲಿದೆ. ಕೈಗೆ ಭರ್ಚಿ ಇರಿತದಿಂದ ತೀವ್ರ ರಕ್ತಸ್ರಾವ ಆಗಿದೆ. ತಕ್ಷಣ ಸ್ಥಳೀಯರು ದೊಡ್ಡಪೇಟೆ ಪೊಲೀಸರಿಗೆ ದಾಳಿ ಕುರಿತು ಮಾಹಿತಿ ನೀಡಿದ್ದಾರೆ. ಗಾಯಾಳು ಕಾರ್ತಿಕ್ ನನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.