ಕಡೂರಲ್ಲಿ ಭೀಕರ ಆಕ್ಸಿಡೆಂಟ್!
– ಸಾರಿಗೆ ಬಸ್- ಕಾರು ಡಿಕ್ಕಿ: 9 ಜನರಿಗೆ ಗಂಭೀರ ಗಾಯ
– ಅಜ್ಜಂಪುರ: ಸಿಲಿಂಡರ್ ಸ್ಫೋಟ, ನಾಲ್ವರಿಗೆ ಗಾಯ
– ನರಸಿಂಹರಾಜಪುರ: ಪ್ರಾಣಿಗಳಿಗೂ ಆಂಬುಲೆನ್ಸ್ ಬಂತು!
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಿಲ್ಲೇನಹಳ್ಳಿ ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ 9 ಜನರಿಗೆ ಗಂಭೀರ ಗಾಯಗಳಾಗಿವೆ.
ಶಿವಮೊಗ್ಗದಿಂದ ತರೀಕೆರೆಗೆ ಬರುತ್ತಿದ್ದ ಸರ್ಕಾರಿ ಬಸ್ ಹಾಗೂ ತರೀಕೆರೆಯಿಂದ ಭದ್ರಾವತಿಗೆ ತೆರಳುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಮಂಗಳವಾರ ಬೆಳಗ್ಗೆ ಮುಖಾಮುಖಿ ಡಿಕ್ಕಿಯಾಗಿವೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಇನ್ನು ಗಾಯಗೊಂಡಿರುವ ಭದ್ರಾವತಿ ಮೂಲದ 9 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಜ್ಜಂಪುರ: ಸಿಲಿಂಡರ್ ಸ್ಫೋಟ, ನಾಲ್ವರಿಗೆ ಗಾಯ
ಅಜ್ಜಂಪುರ ತಾಲ್ಲೂಕಿನ ಸೊಕ್ಕೆ ಗ್ರಾಮದ ಕುಮಾರಪ್ಪ ಅವರ ಮನೆಯ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದ ನಾಲ್ವರಿಗೆ ಸುಟ್ಟ ಗಾಯಗಳಾಗಿವೆ. ಮನೆ ಮತ್ತು ಅಂಗಡಿ ಹೊಂದಿದ್ದ ಕುಮಾರಪ್ಪ ಅವರ ಮನೆಯ ಸಿಲಿಂಡರ್ ಸ್ಫೋಟದಿಂದ ಉಂಟಾದ ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ದಿನಸಿ ಮತ್ತು ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ತರೀಕೆರೆಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಬೆಂಕಿ ನಂದಿಸಲು ಪ್ರಯತ್ನಿಸಿದ ಕುಮಾರಪ್ಪ, ಸಂಬಂಧಿಗಳಾದ ಕಾರ್ತೀಕ್, ಗಿರೀಶ್ ಮತ್ತು ಗ್ರಾಮಸ್ಥರಾದ ಶಾಂತವೀರಪ್ಪ ಅವರು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಣಿಗಳಿಗೂ ಆಂಬುಲೆನ್ಸ್ ಬಂತು…!
ನರಸಿಂಹರಾಜಪುರ: ಪಶು ಆಸ್ಪತ್ರೆಯಲ್ಲಿ ಉಚಿತವಾಗಿ ಪಶುಸಂಜೀವಿನಿ -1962 ತುರ್ತು ಚಿಕಿತ್ಸಾ ವಾಹನ ಸಜ್ಜುಗೊಳಿಸಲಾಗಿದ್ದು, ಇಲ್ಲಿನ ಪಶು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಾಹನಕ್ಕೆ ಭಾನುವಾರ ಶಾಸಕ ರಾಜೇಗೌಡ ಹಸಿರು ನಿಶಾನೆ ತೋರಿದರು. 108 ಮಾದರಿಯಲ್ಲಿ ಪಶುಗಳಿಗೆ ತುರ್ತುಚಿಕಿತ್ಸೆ ಅಗತ್ಯವಾದಾಗ 1962ಕ್ಕೆ ಕರೆ ಮಾಡಿದರೆ ಮನೆ ಬಾಗಿಲಿಗೆ ತುರ್ತು ಚಿಕಿತ್ಸಾ ವಾಹನ ಬರಲಿದೆ. ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಈ ಸೇವೆ ಸಿಗಲಿದೆ. ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಸದಸ್ಯೆ ಜುಬೇದಾ, ಗ್ರಾಮ ಪಂಚಾಯಿತಿ ಸದಸ್ಯ ಗೇರುಬೈಲು ನಟರಾಜ್, ಪ್ರಭಾರಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ರಾಕೇಶ್, ತುರ್ತು ಚಿಕಿತ್ಸಾ ವಾಹನದ ವೈದ್ಯ ಸ್ವರಾಜ್, ಸಾರ್ವಜನಿಕರು ಇದ್ದರು.