ಟಾಪ್ ನ್ಯೂಸ್ ಕರ್ನಾಟಕ
ಒಂದೂವರೆ ತಿಂಗಳಿಂದ ಕರೆಂಟ್ ಇಲ್ಲ.. ಮೊಬೈಲ್ ಚಾರ್ಜ್ ಇಲ್ಲ!
– ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಸಮಸ್ಯೆ
– ಬಳ್ಳಾರಿ: ಸಂಡೂರಿನ ರಾಮನಮಲೈನ ಅರಣ್ಯದಲ್ಲಿ ಗಣಿ ಸದ್ದು?
– ಶಿವಮೊಗ್ಗ: ತ್ಯಾವರೆಕೊಪ್ಪ ಸಿಂಹಧಾಮದ ಸಿಂಹ ಆರ್ಯ ಸಾವು
– ರಾಮನಗರ: ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ!
ಚಿಕ್ಕಮಗಳೂರು: ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ತಪ್ಪಲಿನ ಜನತೆ ಈ ವರ್ಷ ಧಾರಾಕಾರ ಮಳೆಯಿಂದ ಕಂಗೆಟ್ಟು ಹೋಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿರುವ ಅತ್ತಿಗುಂಡಿ ಕುಗ್ರಾಮ ಕಳೆದ 45 ದಿನಗಳಿಂದ ಕರೆಂಟ್ ಇಲ್ಲದೆ ಕತ್ತಲಲ್ಲಿ ಬದುಕುವಂತಾಗಿದೆ. ಇನ್ನು ಮೊಬೈಲ್ ಚಾರ್ಜ್ ಮಾಡಲಾಗದೆ ಇದೀಗ ಹತ್ತಾರು ಗ್ರಾಮಗಳು ಜನ ಸಂಪರ್ಕ ಕಳೆದುಕೊಂಡಿವೆ.
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಇರುವ ಈ ಕುಗ್ರಾಮದ ಸುತ್ತಮುತ್ತ ಕಳೆದ ಒಂದೂವರೆ ತಿಂಗಳಿನಿಂದಲೂ ಧಾರಾಕಾರ ಮಳೆ ಸುರಿಯುತ್ತಿದೆ. ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಳ್ಳಯ್ಯನಗಿರಿಯ ಮಳೆಗೆ ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಅತ್ತಿಗುಂಡಿ ಮಾರ್ಗದಲ್ಲಿ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ
ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಸಿಂಹ ಆರ್ಯ ಸಾವು
ಶಿವಮೊಗ್ಗ : ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ – ಸಿಂಹಧಾಮದ ಗಂಡು ಸಿಂಹ ಆರ್ಯ ಸೋಮವಾರ(ಆ.4) ಮೃತಪಟ್ಟಿದೆ. ಬಹುಅಂಗಾಗಂಗ ವೈಫಲ್ಯದಿಂದ ಬಳಲುತ್ತಿದ್ದ ಆರ್ಯನಿಗೆ ಹುಲಿ -ಸಿಂಹಧಾಮದ ವೈದ್ಯ ಡಾ.ಮುರಳಿ ಮನೋಹರ್ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.18.5 ವರ್ಷದ ಆರ್ಯ ಹುಲಿ – ಸಿಂಹಧಾಮದಲ್ಲಿರುವ ಸಿಂಹಗಳಲ್ಲಿಯೇ ಅತ್ಯಂತ ಹಿರಿಯನಾಗಿದ್ದ. 2008 ರಲ್ಲಿ ಮೈಸೂರು ಮೃಗಾಲಯದಿಂದ ಆರ್ಯನನ್ನು ಶಿವಮೊಗ್ಗಕ್ಕೆ ಕರೆತರಲಾಗಿತ್ತು.
ಸಂಡೂರಿನ ರಾಮನಮಲೈನ ಅರಣ್ಯದಲ್ಲಿ ಗಣಿ ಸದ್ದು?
ಬಳ್ಳಾರಿ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಂಡೂರು ತಾಲ್ಲೂಕಿನ ರಾಮನಮಲೈ ಅರಣ್ಯ ಪ್ರದೇಶದ ರಾಮಗಢದಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ನಡೆಸಲು ಉದ್ದೇಶಿಸಿದೆ. ಗಣಿಗೆ ಅನುಮತಿ ಪಡೆಯುವ ಪ್ರಕ್ರಿಯೆ ಭಾಗವಾಗಿ ಇತ್ತೀಚೆಗೆ ಪರಿಸರ–ಸಾರ್ವಜನಿಕ ಆಲಿಕೆ ಸಭೆ ನಡೆದಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ!
ರಾಮನಗರ: ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ`ತಿಮ್ಮೇಗೌಡ’ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.ರಾಮನಗರ ಜಿಲ್ಲೆಯ ಬಿಡಿದಿ ಬಳಿ ಪೊಲೀಸ್ ಇನ್ಸ್ ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಿಮ್ಮೇಗೌಡರು ಬೆಂಗಳುರು ಸಿಸಿಬಿ ಆರ್ಥಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ತನಿಖೆ ನಡೆಯುತ್ತಿದೆ.