- ತೀವ್ರ ಅನಾರೋಗ್ಯದಿಂದ ಬೆಂಗಳೂರಲ್ಲಿ ವಿಧಿವಶ
- ಬುಧವಾರ ಬೆಳಿಗ್ಗೆವರೆಗೂ ಅಂತಿಮ ದರ್ಶನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಟ ಲೋಹಿತಾಶ್ವ ದೀರ್ಘ ಕಾಲದ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಂಗಳವಾರ ಮಧ್ಯಾಹ್ನ 2.45ಕ್ಕೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಕಳೆದ ಹಲವು ಸಮಯಗಳಿಂದಲೂ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಪುತ್ರ, ಕಲಾವಿದ ಶರತ್ ಲೋಹಿತಾಶ್ವ ಸೇರಿದಂತೆ ಕುಟುಂಬ, ಅಪಾರ ಅಭಿಮಾನಿಗಳನ್ನು ಆಗಲಿದ್ದಾರೆ
500ಕ್ಕೂ ಹೆಚ್ಚು ಸಿನಿಮಾ ನಟನೆ!: ತುಮಕೂರಿನ ತೊಂಡಗೆರೆಯಲ್ಲಿ ಅಗಸ್ಟ್ 5 1942ರಂದು ಜನಿಸಿದ ಲೋಹಿತಾಶ್ವ ಕನ್ನಡದಲ್ಲಿ ಸುಮಾರು 500ಕ್ಕೂ ಅಧಿಕ ಸಿನಿಮಗಳಲ್ಲಿ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ನಾಟಕ, ಧಾರಾವಾಹಿಗಳಲ್ಲಿಯೂ ಅವರು ನಟಿಸಿದ್ದಾರೆ. ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಂಕರನಾಗ್ ನಟನೆಯ ಮಾಲ್ಗುಡಿ ಡೇಸ್, ಗೃಹಭಂಗ, ನಾಟ್ಯರಾಣಿ ಶಾಂತಲಾ ಸೇರಿದಂತೆ ಹಲವು ಧಾರವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.
ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದಲೂ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಸದ್ಯ ಆಸ್ಪತ್ರೆಯಲ್ಲಿಯೇ ಲೋಹಿತಾಶ್ವ ಅವರ ಪಾರ್ಥವ ಶರೀರವನ್ನು ಇರಿಸಲಾಗಿದೆ. ಸಂಜೆ 7.30 ಕುಮಾರಸ್ವಾಮಿ ಲೇಔಟ್ ನಲ್ಲಿರುವ ಮನೆಗೆ ಸ್ಥಳಾಂತರ ಮಾಡಲಾಗುತ್ತದೆ. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬುಧವಾರ ಸಂಜೆ ತುಮಕೂರು ಬಳಿಯ ತೊಂಡೆಗೆರೆ ಗ್ರಾಮಕ್ಕೆ ಕೊಂಡೊಯ್ದು ಅಲ್ಲಿ ಅಂತ್ಯಕ್ರೀಯೆ ನಡೆಸಲಾಗುವುದು ಎಂದು ಹಿರಿಯ ನಟ ಲೋಹಿತಾಶ್ವ ಅವರ ಪುತ್ರ ಶರತ್ ಲೋಹಿತಾಶ್ವ ಅವರು ಮಾಹಿತಿ ನೀಡಿದ್ದಾರೆ. ಸಿನಿಮಾ ರಂಗದ ಪ್ರಮುಖರು, ನಾಡಿನ ಪ್ರಮುಖರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.