- 370 ಕೋಟಿಗೂ ಹೆಚ್ಚು ಹಣ: 1ಕೋಟಿ ಟಿಕೆಟ್ ಮಾರಾಟ
- ಒಬ್ಬರೇ 2-5 ಬಾರಿ ನೋಡಿದ ಮೊದಲ ಸಿನಿಮಾ..!
- ಪಂಜುರ್ಲಿ, ಗುಳಿಗ ದೈವದ ಆಶೀರ್ವಾದ: ರಿಷಬ್ ಶೆಟ್ಟಿ
- ಎಲ್ಲೆಡೆ ಸಂಭ್ರಮ: ಕನ್ನಡದ ಹೆಮ್ಮೆಯ ಚಿತ್ರಕ್ಕೆ ಶುಭಾಷಯ
NAMMUR EXPRESS NEWS
ಕನ್ನಡದ ಸಿನಿಮಾವೊಂದು ಸದ್ದಿಲ್ಲದೇ ಬಂದು ಇಡೀ ಭಾರತ ಚಿತ್ರರಂಗವನ್ನು ಕೇವಲ 25 ದಿನದಲ್ಲೇ ಅಲ್ಲೋಲ ಕಲ್ಲೋಲ ಮಾಡಿದ್ದು ಇದುವರೆಗೆ ಖಂಡಿತ ಸಿನಿಮಾ ರಂಗ ಕಂಡಿರಲಿಲ್ಲ.
ಕರ್ನಾಟಕದ ಕರಾವಳಿಯ ಮೂಲೆಯೊಂದರ ಸಣ್ಣ ಕಥೆ ಮತ್ತು ದೈವ ಪವಾಡದ ಕಥೆ ಇಡೀ ಸಿನಿಮಾ ಜಗತ್ತನ್ನು ಬೆಚ್ಚಿ ಬೀಳಿಸಿದೆ.
ಹೌದು. ನಮ್ಮ ಕನ್ನಡದ ಹೆಮ್ಮೆ ಕಾಂತಾರ ಸಿನಿಮಾ 50 ದಿನ ಪೂರೈಸಿದೆ. ಜಗತ್ತಿನಾದ್ಯಂತ ಹಿರಿ-ಕಿರಿ ಎಂಬ ಬೇಧವಿಲ್ಲದೆ ಎಲ್ಲರ ಹೃದಯಗಳನ್ನು ಗೆದ್ದ ಕಾಂತಾರ ಚಿತ್ರವು ಯಶಸ್ವಿ 50 ದಿನಗಳನ್ನು ಪೂರೈಸಿದೆ.
ಟ್ವಿಟ್ ಮಾಡಿ ಸಂತೋಷವನ್ನು ಹಂಚಿಕೊಂಡಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ,” ನಮಗೆ ದಿವ್ಯ ಸಂಭ್ರಮದ ಕ್ಷಣ. ಜಗತ್ತಿನಾದ್ಯಂತ ಎಲ್ಲರಿಗೂ ಧನ್ಯವಾದಗಳು. ಪಂಜುರ್ಲಿ ಮತ್ತು ಗುಳಿಗ ದೈವದಿಂದ ನಾವು ನಿಜವಾಗಿಯೂ ಆಶೀರ್ವದಿಸಲ್ಪಟ್ಟಿದ್ದೇವೆ. ಆವೇಶವು ಅಜೇಯವಾಗಿ ಉಳಿದಿದೆ” ಎಂದಿದ್ದಾರೆ.
ಕಾಂತಾರ ತನ್ನ ಮೊದಲ 49 ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡಿದೆ ಮತ್ತು ಭಾರತದಲ್ಲಿ ಸರಿಸುಮಾರು 294.89 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಎಲ್ಲಾ ಭಾಷೆ ಸೇರಿ ತನ್ನ ಐವತ್ತನೇ ದಿನದಂದು ಕಾಂತಾರ 0.85 ಕೋಟಿ ರೂ ನಿವ್ವಳ ಲಾಭ ಗಳಿಸಬಹುದು.
ವಿಶ್ವದಾದ್ಯಂತ ಈ ಚಿತ್ರವು 370 ಕೋಟಿ ಗೂ ಅಧಿಕ ಗಳಿಕೆ ಮಾಡಿದೆ ಎಂದು ವರದಿಗಳು ಹೇಳಿವೆ. ಇನ್ನೊಂದು ಸಂತಸದ ಸುದ್ದಿ ಪ್ರಸಿದ್ಧ ಅಂತಾರಾಷ್ಟ್ರೀಯ ಇಂಗ್ಲಿಷ್ ಮಾಧ್ಯಮ ಫ್ರಂಟ್ ಲೈನ್ ಪತ್ರಿಕೆಯು ಕಾಂತಾರ ಚಿತ್ರವನ್ನು ತನ್ನ ಕವರ್ ಸ್ಟೋರಿ ಮಾಡಿದೆ.
ಚಿತ್ರವು ನ.24 ರಂದು ಪ್ರೈಮ್ ಒಟಿಟಿಯಲ್ಲಿ ತೆರೆಕಾಣಲಿದೆ.
300 ಚಿತ್ರ ಮಂದಿರಗಳಲ್ಲಿ 50 ದಿನ!
ಸೆ.30ರಂದು ಕನ್ನಡದಲ್ಲಿ ಬಿಡುಗಡೆಯಾದ ‘ಕಾಂತಾರ’ ಚಿತ್ರವು ರಾಜ್ಯದ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹಾಗೂ ವಿದೇಶದ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿ 100ನೇ ದಿನದತ್ತ ದಾಪುಗಾಲಿಟ್ಟಿದೆ. ಬರೀ ಕನ್ನಡವಷ್ಟೇ ಅಲ್ಲದೇ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ಈ ಚಿತ್ರ ಅಲ್ಲಿಯೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು ಸದ್ಯದಲ್ಲೇ ಪರಭಾಷೆಯಲ್ಲೂ 50 ದಿನಗಳನ್ನು ಪೂರ್ಣಗೊಳಿಸಲಿದೆ. ಐದು ಪ್ರಮುಖ ಭಾಷೆಗಳ ಸಿನಿಮಾಗಳನ್ನು ‘ಹೊಂಬಾಳೆ ಫಿಲ್ಮ್ ‘ ಸಂಸ್ಥೆ ನಿರ್ಮಿಸಿದೆ.
ಎಲ್ಲಾ ವಯಸ್ಸು, ಭಾಷೆ ಮೀರಿ ಗೆಲುವು
ಕಾಂತಾರ ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ ಪ್ರೇಕ್ಷಕನನ್ನು ವಯಸ್ಸು, ಭಾಷೆ, ಪ್ರದೇಶದ ಹಂಗು ತೊರೆದು ಸಿನಿಮಾ ನೋಡಿಸಿದೆ. ಇಲ್ಲಿ ಗೆದ್ದಿದ್ದು ಕಥೆ ಹಾಗೂ ರಿಷಬ್ ಅಭಿನಯ.