ಧಾರಾವಾಹಿ ದೃಶ್ಯದಲ್ಲಿ ಹೆಲ್ಮೆಟ್ ಇಲ್ಲದೆ ದ್ವಿ -ಚಕ್ರ ಸವಾರಿ: ಸೀತಾರಾಮ ನಟಿಗೆ ದಂಡ!
– ನಿಯಮ ಉಲ್ಲಂಘಿಸಿದ್ದಕ್ಕಾಗಿ 7-8 ತಿಂಗಳಿಂದ ಪೊಲೀಸರನ್ನೇ ಕಾಡಿದ ಮಂಗಳೂರಿನ ವ್ಯಕ್ತಿ
– ಇಲ್ಲಿ ನೋಡಿ ವಿಶೇಷ ಸ್ಟೋರಿ..!
NAMMUR EXPRESS NEWS
ಮಂಗಳೂರು: ಸಿನಿಮಾ, ಧಾರವಾಹಿಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವುದು, ಧೂಮಪಾನ ಮಾಡುವುದು, ಮದ್ಯಪಾನ ಮಾಡುವುದು ಇಂತಹ ದೃಶ್ಯಗಳನ್ನು ನಿಯಮಬಾಹಿರವಾಗಿ ಪ್ರಸಾರ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಆದರೆ ಅದರ ಪ್ರಭಾವ ನೇರವಾಗಿ ಜನರ ಮೇಲಾಗುತ್ತಿದೆ. ಹಾಗಿರುವಾಗ ಧಾರಾವಾಹಿ ನಿರ್ಮಿಸುವವರು ಸಮಾಜದ ಬಗ್ಗೆಯೂಎಚ್ಚರ ವಹಿಸಬೇಕಲ್ಲವೇ? ಹೀಗಾಗಿ ಮಂಗಳೂರಿನ ವ್ಯಕ್ತಿಯೊಬ್ಬರು ಕನ್ನಡ ಟಿವಿ ಸೀರಿಯಲ್ ನಲ್ಲಿ ಬಂದ ದೃಶ್ಯವೊಂದರಲ್ಲಿ ಹೆಲ್ಮೆಟ್ ಹಾಕದೆ ಸ್ಕೂಟರ್ ಓಡಿಸಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟು ದಂಡ ವಿಧಿಸುವಂತೆ ಮಾಡಿದ ಪ್ರಸಂಗ ನಡೆದಿದೆ.
ಏನಿದು ಪ್ರಕರಣ?
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಹೆಸರಿನ ಧಾರಾವಾಹಿಯ 14ನೇ ಸಂಚಿಕೆಯ ದೃಶ್ಯದಲ್ಲಿ ಸ್ಕೂಟರ್ನಲ್ಲಿ ಇಬ್ಬರು ಸಂಚರಿಸುವ ದೃಶ್ಯವಿತ್ತು. ಅದರಲ್ಲಿ ಸವಾರೆ ಹೆಲ್ಮೆಟ್ ಧರಿಸಿದ್ದರೆ ಹಿಂಬದಿ ಸವಾರೆ ಹೆಲ್ಮೆಟ್ ಧರಿಸಿರಲಿಲ್ಲ. ಟಿವಿಯಲ್ಲಿ ಪ್ರಸಾರವಾದ ಈ ದೃಶ್ಯವನ್ನು ಮಂಗಳೂರಿನಲ್ಲಿ ವೀಕ್ಷಿಸಿದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ಎಂಬವರು 2023ರ ಆಗಸ್ಟ್ 24ರಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದರು. ತನಿಖೆ ಎತ್ತಿಕೊಂಡ ಕದ್ರಿ ಸಂಚಾರ ಪೂರ್ವ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್, ವಾಹಿನಿಯ ಡೈರೆಕ್ಟರ್ ಮೋಹನ್ ಕುಮಾರ್, ಮಹಿಳೆ ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನದ ಮಾಲೀಕರು ಹಾಗೂ ಧಾರಾವಾಹಿ ನಿರ್ದೇಶಕ ಮಧುಸೂದನ್ ಅವರಿಗೆ ನೋಟೀಸ್ ನೀಡಿದ್ದರು.
ನೋಟೀಸಿಗೆ ಉತ್ತರಿಸಿದ್ದ ಧಾರಾವಾಹಿ ತಂಡವು, ಆ ದೃಶ್ಯವನ್ನು ಬೆಂಗಳೂರಿನ ನಂದಿನಿ ಲೇಔಟ್ ಪ್ರದೇಶದಲ್ಲಿ ಚಿತ್ರೀಕರಿಸಲಾಗಿತ್ತು ಎಂದು ಮಾಹಿತಿ ನೀಡಿದ್ದರು. ಅದರಂತೆ, ಪ್ರಕರಣವನ್ನು ನಂದಿನಿ ಲೇಔಟ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಸುಮ್ಮನಾಗದ ಅರ್ಜಿದಾರರು ಬೆಂಗಳೂರಿನ ನಂದಿನಿ ಲೇಔಟ್ ಠಾಣೆಗೆ 2024ರ ಫೆ.27ರಂದು ಪತ್ರ ಬರೆದಿದ್ದು, ದೂರಿನ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಕೇಳಿದ್ದರು.
ನಟಿ ಹಾಗೂ ಬೈಕ್ ಮಾಲಕಿಗೆ ದಂಡ!
ಅರ್ಜಿಯ ಬಗ್ಗೆ ಪರಿಶೀಲನೆ ನಡೆಸಿದ ನಂದಿನಿ ಲೇಔಟ್ ಠಾಣಾ ಪೊಲೀಸರು ಸಂಬಂಧಪಟ್ಟ ನಟಿಗೆ ಮತ್ತು ಮಾಲಕಿಗೆ ಮೇ 10ರಂದು 500 ರೂ. ದಂಡ ವಿಧಿಸಿದ್ದಾರೆ. ವಿಚಾರಣೆ ವೇಳೆ ತಪ್ಪನ್ನು ಒಪ್ಪಿಕೊಂಡಿರುವ ಧಾರಾವಾಹಿ ತಂಡವು ಇನ್ನು ಮುಂದೆ ನಮ್ಮ ಧಾರಾವಾಹಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವುದಿಲ್ಲ. ನಿಯಮ ಪಾಲಿಸುತ್ತೇವೆ ಎಂದು ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ . ದಂಡದ ಪ್ರತಿಯನ್ನು ಪೊಲೀಸರು ದೂರುದಾರ ಜಯಪ್ರಕಾಶ್ ಅವರಿಗೆ ಕಳಿಸಿಕೊಟ್ಟಿದ್ದಾರೆ. ಒಟ್ಟಾರೆ ಪ್ರಮುಖ ಟಿವಿ ಮಾಧ್ಯಮದಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುವ ದೃಶ್ಯ ಜನರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎನ್ನುವ ಅವರ ಹೋರಾಟಕ್ಕೆ ಅಂತೂ ಜಯ ಸಿಕ್ಕಿದೆ.