ರಕ್ಷಿತ್ ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ರಿಲೀಸ್!
– ಅಲೆಗಳ ಏರಿಳಿತದಲ್ಲೊಂದು ಸುಂದರ ಪಯಣ
– ವಿಶ್ವಾಸ ಜೊತೆಗೊಂದು ಭವಿಷ್ಯದ ಭರವಸೆ ಕಟ್ಟಿ ಕೊಟ್ಟಿರುವ ಚಿತ್ರ
NAMMUR EXPRESS NEWS
నిಜವಾದ ಪ್ರೀತಿಗೆ ಬಣ್ಣ ಬಣ್ಣದ ಮಾತುಗಳು ಬೇಕಾಗಿಲ್ಲ, ಸರ್ಪೈಸ್ ಗಿಫ್ಟ್ಳ ಆಗತ್ಯವಿಲ್ಲ, ಆಸ್ತಿ-ಅಂತಸ್ತು ಲೆಕ್ಕಕ್ಕೇ ಬರೋದಿಲ್ಲ. ಅಲ್ಲಿ ಬೇಕಾಗಿರೋದು ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸ ಜೊತೆಗೊಂದು ಭವಿಷ್ಯದ ಭರವಸೆ ಈ ಅಂಶಗಳನ್ನು ಮೂಲವಾಗಿಟ್ಟುಕೊಂಡು ಅದನ್ನು ಅಚ್ಚುಕಟ್ಟಾಗಿ ಮನಮುಟ್ಟುವಂತೆ ಕಟ್ಟಿ ಕೊಟ್ಟಿರುವ ಚಿತ್ರ “ಸಪ್ತಸಾಗರದಾಚೆ ಎಲ್ಲೋ’.
ಈ ಸಿನಿಮಾದ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಾದರೆ ನೋಡ ನೋಡುತ್ತಲೇ ಕಾಡುವ ಸಿನಿಮಾ. ಆ ಮಟ್ಟಿಗೆ ನಿರ್ದೇಶಕ ಹೇಮಂತ್ ಒಂದು ಸುಂದರವಾದ ಕಥೆಯನ್ನು ಅಷ್ಟೇ ಸೊಗಸಾಗಿ ಹೆಣೆದು ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ.
“ಸಪ್ತಸಾಗರದಾಚೆ ಎಲ್ಲೋ’ ಒಂದು ಔಟ್ ಅಂಡ್ ಔಟ್ ಲವ್ಸ್ಟೋರಿ. ಹಾಗಂತ ಇದು ಸಾದ-ಸೀದಾ ಲವ್ಸ್ಟೋರಿ ಯಲ್ಲ, ಇಂಟೆನ್ಸ್ ಲವ್ಸ್ಟೋರಿ. ಈ ಲವ್ ಸ್ಟೋರಿಗೆ ಹಲವು ಮಗ್ಗುಲುಗಳಿವೆ. ಪ್ರೀತಿ, ದ್ವೇಷ, ಸ್ವಾರ್ಥ, ಮೋಸ ಹೀಗೆ ವಿವಿಧ ಆಯಾಮಗಳೊಂದಿಗೆ ಸಿನಿಮಾ ಸಾಗುವುದು ವಿಶೇಷ.
ಹಾಗಂತ ಯಾವುದನ್ನೂ ಇಲ್ಲಿ ಅತಿಯಾಗಿ ತೋರಿಸಿಲ್ಲ. ಎಲ್ಲವೂ ಮೂಲಕಥೆಯಲ್ಲಿ ಹಾಸುಹೊಕ್ಕಾಗಿದೆ. ಮನು ಪ್ರಿಯಾಳ ಸರಳ ಸುಂದರ ಪ್ರೇಮಕಥೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅವರ ಕನಸು, ಭವಿಷ್ಯದ ಭರವಸೆ, ಪರಸ್ಪರ ಅರ್ಥಮಾಡಿಕೊಂಡಿರುವ ರೀತಿ. ಈ ಅಂಶದೊಂದಿಗೆ ಸಾಗುವ ಕಥೆಯಲ್ಲೊಂದು ತಿರುವು. ಅಲ್ಲಿಂದ ಸಿನಿಮಾದ ಬಣ್ಣ, ಓಘ ಎಲ್ಲವೂ ಬದಲು. ಕಥೆ ಹೆಚ್ಚು ಗಂಭೀರವಾಗುತ್ತಾ ಸಾಗುವ ಜೊತೆಗೆ ಹೆಚ್ಚಿನ ಕುತೂಹಲಕ್ಕೆ ನಾಂದಿ. ಮೊದಲೇ ಹೇಳಿದಂತೆ ಲವ್ಸ್ಟೋರಿಯಲ್ಲಿ ಇರಬೇಕಾದ ಬಣ್ಣ ಬಣ್ಣದ ಮಾತುಗಳು, ಕಲರ್ಫುಲ್ ಹಾಡುಗಳು, ನಾಯಕ-ನಾಯಕಿಯ ರೊಮ್ಯಾನ್ಸ್. ಇವುಗಳಿಂದ “ಸಪ್ತ ಸಾಗರ’ ಮುಕ್ತವಾಗಿದೆ. ಆದರೂ ಸಿನಿಮಾ ಕಾಡುತ್ತದೆ ಎಂದರೆ ಅದಕ್ಕೆ ಸಿನಿಮಾದ ಕಥೆ ಹಾಗೂ ಕಟ್ಟಿಕೊಟ್ಟಿರುವ ರೀತಿ ಕಾರಣ. ಮೂಲಕಥೆ ಹಾಗೂ ಆಶಯ ಸ್ಪಷ್ಟವಾಗಿದ್ದಾಗ ಭಾಷೆ, ಪರಿಸರ ಯಾವುದೂ ಮುಖ್ಯವಾಗುವುದಿಲ್ಲ. ಇಲ್ಲೂ ಅಷ್ಟೇ ಭಾಷೆ, ಪರಿಸರದ ಹಂಗು ಮೀರಿ “ಸಪ್ತ’ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾ ಹೋಗುತ್ತದೆ.
ಸಾಮಾನ್ಯವಾಗಿ ಸಿನಿಮಾಗಳು ಆರಂಭವಾಗಿ ಕಥೆ ತೆರೆದುಕೊಳ್ಳುವ ಹೊತ್ತಿಗೆ ಮಧ್ಯಂತರ ಬಂದಿರುತ್ತದೆ. ಆದರೆ, ನಿರ್ದೇಶಕ ಹೇಮಂತ್ ಸಿನಿಮಾದ ಆರಂಭವನ್ನೇ ಕಥೆಯೊಂದಿಗೇ ಮಾಡಿದ್ದಾರೆ. ಹಾಗಾಗಿ, ಪ್ರೇಕ್ಷಕನಿಗೂ ಸಿನಿಮಾ ಆರಂಭದಿಂದಲೇ ಆಪ್ತವಾಗುತ್ತಾ ಸಾಗುವುದು ಈ ಸಿನಿಮಾದ ಪ್ಲಸ್. ಚಿತ್ರದ ಕೆಲವು ಅಂಶಗಳನ್ನು ತುಂಬಾ ಸೊಗಸಾಗಿ ಕಟ್ಟಿಕೊಡಲಾಗಿದೆ. ಅದರಲ್ಲೊಂದು ನಾಯಕಿ ಬಾಳಲ್ಲಿ ಬರುವ ಸನ್ನಿವೇಶ ಹಾಗೂ ನಾಯಕನ ಸಿಟ್ಟಿನ ಕಟ್ಟೆ ಒಡೆಯುವುದು. ಈ ತರಹದ ಹಲವು ಸನ್ನಿವೇಶಗಳು ಸಿನಿಮಾವನ್ನು ಮತ್ತಷ್ಟು ಹತ್ತಿರವಾಗಿಸುತ್ತವೆ.