- 11 ವರ್ಷಗಳ ಬಳಿಕ ತೀರ್ಪು ಪ್ರಕಟ
- ಆರೋಪಿ ಸಂತೋಷ್ ರಾವ್ ದೋಷಮುಕ್ತ
- ಸಾಕ್ಷಿ ಇಲ್ಲದ ಕಾರಣ ಸಿಬಿಐ ಕೋರ್ಟ್ ಆದೇಶ
ಬೆಳ್ತಂಗಡಿ: ರಾಷ್ಟ್ರಮಟ್ಟದಲ್ಲಿ ಬಾರೀ ಸುದ್ದಿಯಾಗಿದ್ದ ಉಜಿರೆಯ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಧರ್ಮಸ್ಥಳದ ನಿವಾಸಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯ ಬರೋಬ್ಬರಿ 11 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ರಾವ್ ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಏನಿದು ಘಟನೆ?: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಳಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಕರಾವಳಿಯಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಕಾಲೇಜು ಮುಗಿಸಿ ಮನೆಗೆ ಬರುತ್ತಿದ್ದ ಸೌಜನ್ಯಳನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಸಾಕ್ಷಾಧಾರ ಕೊರತೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ.
2012 ಅಕ್ಟೋಬರ್ 10 ರಂದು ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಸೌಜನ್ಯ ನಾಪತ್ತೆಯಾಗಿದ್ದಳು. ಈ ಕುರಿತು ಸೌಜನ್ಯ ತಂದೆ ಚಂದ್ರಪ್ಪ ಗೌಡ ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಧರ್ಮಸ್ಥಳದ ಬಳಿಯಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಆರಂಭಿಕ ಹಂತದಲ್ಲಿ ಬೆಳ್ತಂಗಡಿ ಠಾಣೆಯ ಪೊಲೀಸರು ತನಿಖೆಯನ್ನು ನಡೆಸಿದ್ದು, ನಂತರದಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿತ್ತು. ಆದರೆ ಪ್ರಕಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಪ್ರಕರಣ ದೇಶದಾದ್ಯಂತ ಸದ್ದು ಮಾಡುತ್ತಿದ್ದಂತೆಯೇ ರಾಜ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ತನಿಖೆಯನ್ನು ನಡೆಸಿದ್ದ ಸಿಬಿಐ ಅಧಿಕಾರಿಗಳು 2016 ರಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು. ಆದರೆ ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿ ಸೂಕ್ತವಾಗಿಲ್ಲ ಎಂದು ಸೌಜನ್ಯ ತಂದೆ ಆರೋಪಿಸಿದ್ದು, ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದರು.
2018ರಲ್ಲಿ ಸೌಜನ್ಯ ತಂದೆ ಮರುತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ್ದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೇ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಇನ್ನು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ಪ್ರಮುಖ ಆರೋಪಿ ಎಂದು ಸಿಬಿಐ ಚಾರ್ಜ್ಶೀಟ್ ಸಲ್ಲಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿದ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.