ಶೃಂಗೇರಿ ಸಾಮೂಹಿಕ ರೇಪ್: ಹಣಕ್ಕಾಗಿ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ್ದ ತಾಯಿಗೆ 20 ವರ್ಷ ಜೈಲು!
– ತಾಯಿ ಸೇರಿದಂತೆ ನಾಲ್ವರು ದೋಷಿ, 49 ಜನ ಖುಲಾಸೆ
– ಏನಿದು ಕೇಸ್…3 ವರ್ಷಗಳ ಬಳಿಕ ತೀರ್ಪು
NAMMUR EXPRESS NEWS
ಶೃಂಗೇರಿ: ರಾಜ್ಯದಲ್ಲೇ ಗಮನ ಸೆಳೆದಿದ್ದ ಶೃಂಗೇರಿ ಬಾಲಕಿ ಸಾಮೂಹಿಕ ರೇಪ್ ಕೇಸ್ ಈಗ ಅಂತ್ಯ ಕಂಡು ತಾಯಿ ಸೇರಿ ನಾಲ್ವರಿಗೆ ಶಿಕ್ಷೆಯಾಗಿದೆ. ಹಣಕ್ಕಾಗಿ ತಾಯಿಯೇ ಅಪ್ರಾಪ್ತ ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣಕ್ಕೆ ಬಂಧಿಸಿದಂತೆ ವಿಶೇಷ ನ್ಯಾಯಾಲಯವು ಮೂರು ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದೆ. ಬಾಲಕಿಯ ತಾಯಿ ಸೇರಿದಂತೆ ನಾಲ್ಕು ಜನರ ಮೇಲೆ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಜನರನ್ನು ದೋಷಿ ಎಂದು ಚಿಕ್ಕಮಗಳೂರು ನ್ಯಾಯಾಲಯ ತೀರ್ಪು ನೀಡಿದ್ದು, 53 ಜನರ ಪೈಕಿ 49 ಜನರನ್ನ ಪ್ರಕರಣದಿಂದ ಖುಲಾಸೆಗೊಳಿಸಿದೆ.
ಏನಾಗಿತ್ತು ಪ್ರಕರಣ?
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ತಾಯಿಯೇ ಅಪ್ರಾಪ್ತ ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಚಿಕ್ಕಮಗಳೂರು ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯವು ನಾಲ್ವರು ಅಪರಾಧಿಗಳಿಗೆ ಶಿಕ್ಷಿ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆ ಪ್ರಮಾಣ ಯಾರಿಗೆ ಎಷ್ಟೆಷ್ಟು?
ಪ್ರಕರಣದ ಎ1 ಆರೋಪಿ ಅಭಿನಂದನ್ ಅಲಿಯಾಸ್ ಸ್ಮಾಲ್ ಅಭಿಗೆ 22 ವರ್ಷ ಜೈಲು ಶಿಕ್ಷೆ ನೀಡಿ ಕೋರ್ಟ್ ತೀರ್ಪು ನೀಡಿದೆ. ಇನ್ನು ಉಳಿದ ಮೂವರು ಆರೋಪಿಗಳಾದ ಸಂತ್ರಸ್ತ ಬಾಲಕಿ ತಾಯಿ ಗೀತಾ, ಗಿರೀಶ್ ಹಾಗೂ ದೇವಿಶರಣ್ ಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹಾಗೂ ಪ್ರಕರಣದ ನಾಲ್ವರು ಆರೋಪಿಗಳಿಗೂ ತಲಾ 25 ಸಾವಿರ ದಂಡ ವಿಧಿಸಿ ನ್ಯಾಯಮೂರ್ತಿ ಶಾಂತಣ್ಣ ಆಳ್ವ ಸೋಮವಾರ ತೀರ್ಪು ನೀಡಿದ್ದಾರೆ.
ಘಟನೆಯ ಹಿನ್ನಲೆ ಏನು?
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕುಂಚೇಬೈಲ್ ಸಮೀಪದ ಗ್ರಾಮವೊಂದರಲ್ಲಿ ವಾಸವಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಜನವರಿ 30, 2021 ರಂದು ಪ್ರಕರಣ ದಾಖಲಾಗಿತ್ತು.
ಒಂದೇ ಪ್ರಕರಣದಲ್ಲಿ 53 ಮಂದಿ ಅರೆಸ್ಟ್!
ಪ್ರಕರಣ ದಾಖಲಾದ ಹಿನ್ನಲೆ ಅಂದಿನ ಹೆಚ್ಚುವರಿ ಎಸ್ಪಿ ಶ್ರುತಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಒಂದೇ ಪ್ರಕರಣದಲ್ಲಿ 38 ವಿವಿಧ ರೀತಿಯ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದಲ್ಲಿ ಒಟ್ಟು 53 ಜನರನ್ನು ಬಂಧಿಸಲಾಗಿತ್ತು. ಸಂತ್ರಸ್ತ ಬಾಲಕಿಯ ತಾಯಿ ಸೇರಿದಂತೆ ನಾಲ್ಕು ಜನರ ಮೇಲಿನ ಅಪರಾಧ ಸಾಬೀತು ಮಾಡಿದ್ದ ಕೋರ್ಟ್, ಕಳೆದ ಮಾರ್ಚ್ 7ರಂದು ಉಳಿದ 49 ಮಂದಿಯನ್ನು ನಿರ್ದೋಷಿಗಳು ಎಂದು ತೀರ್ಮಾನಿಸಿ ಕೇಸ್ ಖುಲಾಸೆಗೊಳಿಸಿತ್ತು. ಇದೀಗ ನಾಲ್ವರು ಆರೋಪಿಗಳಿಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಮೂರ್ತಿ ಶಾಂತಣ್ಣ ಆಳ್ವ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.