ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಊರಿಗಿಲ್ಲ ಅಭಿವೃದ್ಧಿ ಭಾಗ್ಯ!
– ಸೇತುವೆ ಇಲ್ಲ, ರಸ್ತೆ ಇಲ್ಲ, ಬೆಳಕೂ ಇಲ್ಲ… ಕೇಳೋರು ಯಾರು ಇಲ್ಲ
– ಸಿಎಂ, ಸಚಿವರು, ಶಾಸಕರ ಭರವಸೆ ಈಡೇರಿಲ್ಲ
NAMMUR EXPRESS NEWS
ಕಾರ್ಕಳ : ಕಾರ್ಕಳ ಬೆಳ್ತಂಗಡಿ ತಾಲೂಕುಗಳ ಗಡಿ ಪ್ರದೇಶವಾದ ಈದುವಿನ ಬೊಳ್ಳೆಟ್ಟು ಭಾಗದಲ್ಲಿ ಮೂಲಸೌಕರ್ಯ ವಿಲ್ಲದೆ ಅಭಿವೃದ್ಧಿ ಮರಿಚಿಕೆಯಾಗಿದೆ. ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಗ್ರಾಮದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಟ್ಟುವ ಸುವರ್ಣ ನದಿಯು ಈದು ಗ್ರಾಮದ ಬೊಳ್ಳೆಟ್ಟು ಪ್ರದೇಶದಲ್ಲಿ ಹರಿಯುತ್ತಿದೆ. ಆದರೆ ಮಳೆಗಾಲವೆಂದರೆ ಈ ಗ್ರಾಮಕ್ಕೆ ಕಷ್ಟ, ಏಕೆಂದರೆ 4 ತಿಂಗಳು ಲಾರಿ ಪಿಕಪ್ ಸಹಿತ ವಾಹನ ಗಳು ಬರುವಂತಿಲ್ಲ. ವಾಹನಗಳು ಸಾಗಬೇಕಾದರೆ ಮಳೆಗಾಲ ಕಳೆದು ಚಳಿಗಾಲ ಕಳೆಯಬೇಕು . ನದಿಯ ಮೂಲಕ ವಾಹನ ಸಾಗಿ ಬೊಳ್ಳೆಟ್ಟು ತಲುಪಬೇಕು.
ಈದುವಿನಿಂದ ಸಂಪರ್ಕವಿಲ್ಲ: ಕಾರ್ಕಳ ತಾಲೂಕಿನ ಈದು ಗ್ರಾಮ ಪಂಚಾಯಿತಿಯಿಂದ ಬೊಲ್ಲೊಟ್ಟಿಗೆಸಾಗಲು ಸುಮಾರು ನಾಲ್ಕು ಕಿಮೀ ನಡೆದುಕೊಂಡು ಸಾಗಬೇಕು.ಯಾವುದೇ ವಾಹನ ಸಂಚಾರಕ್ಕೆ ಸಾಧ್ಯವಿಲ್ಲ. ಅದರೆ ಪರ್ಯಾಯ ವಾಗಿ ಕಾಲು ಸಂಕ ವನ್ನು ಮಾತ್ರ ನಿರ್ಮಾಣ ಮಾಡಲಾಗಿದೆ. ಆದರೆ ಬೊಲ್ಲೊಟ್ಟು ಪ್ರದೇಶಕ್ಕೆ ಸಾಗಲು ದ.ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಮೂಲಕ ನಾಲ್ಕು ಕಿ.ಮೀ ರಿಕ್ಷಾ ಮೂಲಕ ಕ್ರಮಿಸಬೇಕು. ಆದರೆ ಈ ರಸ್ತೆಯಲ್ಲಿ ಯಾವುದೇ ಲಾರಿ ಸೇರಿದಂತೆ ಯಾವುದೇ ದೊಡ್ಡ ಗಾತ್ರದ ವಾಹನಗಳು ಸಾಗಲು ಸಾಧ್ಯವಿಲ್ಲ. ಆದರೆ ಎನ್ ಕೌಂಟರ್ ನಡೆದ ಬಳಿಕ 65 ಕುಟುಂಬಗಳಿಗೆ ಯೋಗ್ಯವಾಗುವಂತೆ ಸ್ತಳೀಯರೆ ಸೇರಿ ಖಾಸಗಿ ಜಾಗವನ್ನು ಬಿಟ್ಟುಕೊಟ್ಟು 9 ಅಡಿ ಅಗಲದ ಕಚ್ಚಾ ರಸ್ತೆ ಯನ್ನು ತಾವೇ ನಿರ್ಮಾಣ ಮಾಡಿದ್ದರು.ಆದರೆ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ರಸ್ತೆ ಯ ಎರಡೂ ಭಾಗಗಳಲ್ಲಿ ತಡೆಗೋಡೆ ನಿರ್ಮಿಸಿ ಕೊಟ್ಟಿದ್ದರು.ಈ ರಸ್ತೆಯಲ್ಲಿ ಯಾವುದೇ ಹಿರಿಗಾತ್ರದ ಲಾರಿಗಳು ಸಾಗಲು ಸಾಧ್ಯವಿಲ್ಲ. ಕೇವಲ ರಿಕ್ಷಾ ಮಾತ್ರ ಸಾಗಬಹುದಾಗಿದೆ.
ಶವವನ್ನು ಹೊತ್ತು ಸಾಗಿದರು!
ಮಳೆಗಾಲದಲ್ಲಿ ಬೊಳ್ಳೆಟ್ಟು ಪ್ರದೇಶದಲ್ಲಿ ತುಂಬಿ ಹರಿಯುತಿದ್ದ ಸುವರ್ಣ ನದಿಯು ದಾಟಲು ಸಾಧ್ಯವಾಗದೆ ಕಲ್ಲು ಬಂಡೆಗಳನ್ನು ಹತ್ತಿಕೊಂಡು ಶವವನ್ನು ಹೊತ್ತುಕೊಂಡು ನಾಲ್ಕು ಕಿ.ಮೀ ನಡೆದು ಹೋಗಬೇಕಾದ ಪರಿಸ್ಥಿತಿ ಬಂದಿತ್ತು ಎನ್ನುತ್ತಾರೆ ಬೊಳ್ಳೆಟ್ಟಿನ ಮೊಯಿದ್ದಿನ್ , ಶಾಲೆ ಮಕ್ಕಳಿಗೆ ಮಾತ್ರ ನಾಲ್ಕು ತಿಂಗಳು ರಜೆ ಹೆಚ್ಚಿನ ಶಿಕ್ಷಣ ಕಲಿತವರು ಬೆರಳೆಣಿಕೆಯಷ್ಟು ಮಾತ್ರ ಅಥವಾ ದೂರದ ಹಾಸ್ಟೆಲ್ ಗೆ ಸೇರಿಸಬೇಕು ಎಂದು ಅವಲತ್ತು ಕೊಂಡರು .
ಬೊಳ್ಳೆಟ್ಟು ಭಾಗವನ್ನು ಬೆಳ್ತಂಗಡಿ ತಾಲೂಕಿಗೆಕ್ಕೆ ಸೇರಿಸಿ
ಈದು ಗ್ರಾಮಧ ಬೊಳ್ಳೆಟ್ಟು ಪ್ರದೇಶದಲ್ಲಿ ಒಟ್ಟು 65 ಕುಟುಂಬಗಳಿದ್ದು ಸುಮಾರು ಮುನ್ನೂರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆ ಕಾಣುತ್ತಿದೆ. ಇಲ್ಲಿಯ ಜನ ಬೊಳ್ಳೆಟ್ಟು ಈದುವನ್ನು ಆಶ್ರಯಿಸದೆ ನಾರಾವಿ ಹಾಗೂ ಬೆಳ್ತಂಗಡಿ ತಾಲೂಕನ್ನು ಆಶ್ರಯಿಸಿದ್ದಾರೆ. ಆದರೆ ಈದು ಗ್ರಾಮ ಕಾರ್ಕಳ ತಾಲೂಕಿನಲ್ಲಿ ಬರುವ ಕಾರಣ ಕೇವಲ ಪಡಿತರ ವ್ಯವಸ್ಥೆಗಾಗಿ ಮಾತ್ರ ಈದುವನ್ನು ಆಶ್ರಯಿಸಬೇಕು. ಆದ್ದರಿಂದ ನಮಗೆ ಬೊಳ್ಳೆಟ್ಟು ಭಾಗವನ್ನು ಈದುವಿನಿಂದ ಬೇರ್ಪಡಿಸಿ ನಾರಾವಿಗೆ ಸೇರಿಸಿ ಬೆಳ್ತಂಗಡಿ ತಾಲೂಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಬೊಳ್ಳೆಟ್ಟಿನ ಹಿರಿಯರು.
ಲೈಟ್ ಕಂಬಗಳಿದ್ದರು ದಾರಿಗೆ ಸ್ಟ್ರೀಟ್ ಲೈಟ್ಗಳಿಲ್ಲ
ಎನ್ಕೌಂಟರ್ ನಡೆದ ಸಂದರ್ಭದಲ್ಲಿ ಈ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಯಾಗಿತ್ತು ಬಳಿಕ ಬೊಳ್ಳೆಟ್ಟು ಗೆ ಸಾಗಲು ಕಾಡದಾರಿಯ ಮೂಲಕ ನಡೆದುಕೊಂಡು ಹೋಗಲು ಸ್ಟ್ರೀಟ್ ಲೈಟ್ ಗಳನ್ನು ಕೂಡ ಪಂಚಾಯತ್ ಒದಗಿಸುವಲ್ಲಿ ವಿಫಲವಾಗಿದೆ.ಈ ಬೊಳ್ಳೆಟ್ಟು ಗ್ರಾಮದಲ್ಲಿ 65 ಕುಟುಂಬಗಳಿವೆ.
ಇಚ್ಛಾಶಕ್ತಿ ಕೊರತೆ: ಅಂದಿನ ಕೇಂದ್ರ ಸಚಿವರಾಗಿದ್ದ ಎಂ ವೀರಪ್ಪ ಮೊಯ್ಲಿ ಯವರು ಎನ್ಕೌಂಟರ್ ನಡೆದಿದ್ದ ರಾಮಪ್ಪ ಪೂಜಾರಿ ಮನೆಗೆ ಭೇಟಿ ನೀಡಿದ್ದು ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಭರವಸೆ ನೀಡಿದ್ದರು ,ಆದರೆ ಭರವಸೆಯಾಗಿಯೆ ಉಳಿದಿತ್ತು.ದಿ.ಧರಂ ಸಿಂಗ್ ಮುಖ್ಯ ಮಂತ್ರಿ ಯಾಗಿದ್ದ ಸಮಯದಲ್ಲಿ ಅಂದಿನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಬೊಳ್ಳೊಟ್ಟು ಗೆ ಭೇಟಿ ನೀಡಿದ್ದು ಭರವಸೆ ನೀಡಿದ್ದರು,ಭರವಸೆಗಳು ಇನ್ನೂ ಭರವಸೆಯಾಗಿಯೆ ಉಳಿದಿದೆ. ಯಾವುದೇ ಅಭಿವೃದ್ಧಿ ಫಲಶ್ರುತಿ ಕಂಡಿಲ್ಲ. ಬಳಿಕ ನವೆಂಬರ್ 17 ಕ್ಕೆ ಎನ್ಕೌಂಟರ್ ನಡೆದು 21 ವರ್ಷಗಳು ಕಳೆದಿವೆ.
ಶಾಲೆಗೆ ನಾಲ್ಕು ಕಿಮೀ ನಡೆದೆ ಸಾಗಬೇಕು: ಬೊಳ್ಳೆಟ್ಟು ಪ್ರದೇಶದ ಮಠದ ಬೆಟ್ಟು ಎಂಬಲ್ಲಿ ಸೇತುವೆ ನಿರ್ಮಾಣಕ್ಕಾಗಿ ಜನತೆ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನ ವಾಗಿಲ್ಲ.ಬೊಳ್ಳೆಟ್ಟು ಪರಿಸರದಲ್ಲಿನ ಶಾಲಾ ಮಕ್ಕಳು ನಿತ್ಯ ಶಾಲೆ ಕಾಲೇಜುಗಳಿಗೆ ತೆರಳಲು ಕಾಡು ದಾರಿ ಮಧ್ಯೆ ಕಾಲು ನಡಿಗೆಯಲ್ಲೇ ನಾಲ್ಕು ಕಿ.ಮೀ ಸಾಗಬೇಕಾಗಿದೆ. .