- ಎಂದಿನಂತೆ ಶಾಲಾ, ಕಾಲೇಜುಗಳು ಪ್ರಾರಂಭ
- ಶಿವಮೊಗ್ಗ ಹೆಸರಿಗೆ ಪದೇ ಪದೇ ಗಲಭೆ ಕಳಂಕ!
NAMMUR EXPRESS NEWS
ಶಿವಮೊಗ್ಗ: ಅಶಾಂತಿಗೆ ಕಾರಣವಾಗಿದ್ದ ಶಿವಮೊಗ್ಗ ಹಾಗೂ ಭದ್ರಾವತಿ ನಗರ ವ್ಯಾಪ್ತಿಯ ಎಲ್ಲಾ ಶಾಲೆ, ಕಾಲೇಜುಗಳು ಬುಧವಾರ ಎಂದಿನಂತೆ ಶುರುವಾಗಿವೆ.
ನಗರದಲ್ಲಿ ಜನ ಎಂದಿನಂತೆ ಓಡಾಟ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ತೆರವು ವಿಚಾರಕ್ಕೆ ಗಲಾಟೆಯಾಗಿ ಯುವಕನಿಗೆ ಚಾಕು ಇರಿತವಾಗಿದ್ದರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಶಿವಮೊಗ್ಗ, ಭದ್ರಾವತಿ ನಗರ ವ್ಯಾಪ್ತಿಯ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು.ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಹಿನ್ನಲೆಯಲ್ಲಿ ಬುಧವಾರದಿಂದ ಎಂದಿನಂತೆ ಶಾಲಾ, ಕಾಲೇಜುಗಳು ನಡೆಯುತ್ತಿವೆ.
ಶಿವಮೊಗ್ಗದಲ್ಲಿ ನಡೆಯುತ್ತಿರುವ ಗಲಭೆ ಪದೇ ಪದೇ ಶಿವಮೊಗ್ಗ ಹೆಸರಿಗೆ ಕಳಂಕ ತರುತ್ತಿದೆ. ವ್ಯಾಪಾರ, ವಹಿವಾಟು, ಮಲೆನಾಡಿನ ಹೆಸರಿಗೆ ಕಳಂಕ ತರುತ್ತಿದೆ.
ನಿಷೇಧಾಜ್ಞೆ ಮುಂದುವರಿಕೆ
ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದ್ದು, ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತವಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಪ್ರಕರಣದ ಸಂಬಂಧ ಟಿವಿ9 ಜೊತೆ ಮಾತನಾಡಿದ ಅವರು ನಗರದಲ್ಲಿ ಬುಧವಾರ ಶಾಲಾ-ಕಾಲೇಜುಗಳು ಆರಂಭವಾಗಿವೆ. ಯಾರು ಭಯಪಡುವ ಅಗತ್ಯವಿಲ್ಲ. 2 ದಿನದಲ್ಲಿ ನಗರ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದರು.
ಪೋಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಚಾಕು ಇರಿತ ಪ್ರಕರಣ ಆರೋಪಿಗಳ ಬಂಧನವಾಗಿದೆ. ಈಗಾಗಲೆ ಮುಬಾರಕನ ಬಂಧನವಾಗಿದೆ ಎಂದು ತಿಳಿಸಿದರು. ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದ್ದು, ಕಳೆದ ಎರಡು ದಿನಗಳಿಂದ ಗಾಂಧಿ ಬಜಾರ್ ಬಂದ್ ಆಗಿದೆ. ಗಾಂಧಿ ಬಜಾರ್ನಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಹಿನ್ನಲೆ ಬುಧವಾರ ಗಾಂಧಿ ಬಜಾರ್ ಅಂಗಡಿ ಓಪನ್ ಗೆ ಅವಕಾಶ ನೀಡಲಾಗಿದೆ.
ಭದ್ರಾವತಿಯಲ್ಲಿ ಮುಂದುವರಿದ ಅಘೋಷಿತ ಬಂದ್ ಮುಂದುವರೆದಿದ್ದು, ಭದ್ರಾವತಿಯಲ್ಲಿ ಬುಧವಾರ ಕೂಡ ಅಂಗಡಿಗಳು ಬಂದ್ ಆಗಿವೆ. ಅಗತ್ಯ ವಸ್ತುಗಳ ಅಂಗಡಿ ಹೊರತುಪಡಿಸಿ ಎಲ್ಲ ಬಂದ್ ಆಗಿವೆ. ಹೋಟೆಲ್ನಲ್ಲಿ ಪಾರ್ಸೆಲ್ಗಷ್ಟೇ ಅವಕಾಶ ನೀಡಲಾಗಿದೆ. ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಿಷೇಧಾಜ್ಞೆ ಮುಂದುವರಿಕೆಯಾಗಿದ್ದು, ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಇದೆ.