- ಒತ್ತುವರಿ ತೆರವಿಗೆ ಅಕ್ಟೋಬರ್ ಗಡುವು
- ಖಾತೆಗಳ ವಿವರವನ್ನು ಸ್ಯಾಟ್ಸ್ ತಂತ್ರಾಂಶದಲ್ಲಿ ನಮೂದಿಸುವಂತೆ ಸೂಚನೆ
NAMMUR EXPRESS NEWS
ಬೆಂಗಳೂರು: ಸರ್ಕಾರಿ ಶಾಲೆ-ಕಾಲೇಜುಗಳ ಆಸ್ತಿ ಸಂರಕ್ಷಣಾ ಅಭಿಯಾನದಡಿ ಅಕ್ಟೋಬರ್ನೊಳಗೆ ಒತ್ತುವರಿ ತೆರವು ಮಾಡಿಸಿ ಶಿಕ್ಷಣ ಸಂಸ್ಥೆಯ ಹೆಸರಿಗೆ ಖಾತೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಂಬಂಧಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಸಿದೆ.
ದಾನಿಗಳು, ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆ, ಕಾಲೇಜಿಗೆ ನೀಡಿರುವ ನಿವೇಶನ, ಭೂಮಿಯು ಶಿಕ್ಷಣ ಸಂಸ್ಥೆಗಳ ಹೆಸರಿಗೆ ಖಾತೆ ಆಗದೆ ಕೆಲವೆಡೆ ಒತ್ತುವರಿಯಾಗಿದೆ. ಇದು ಕೆಲವೊಮ್ಮೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುವ ಸನ್ನಿವೇಶ ಉಂಟಾಗುತ್ತದೆ. ಆಸ್ತಿ ಬೇರೆಯವರ ಪಾಲಾಗುವುದನ್ನು ತಪ್ಪಿಸಲು ಇಲಾಖೆಯು ಆಗಸ್ಟ್ನಿಂದ ಅಕ್ಟೋಬರ್ವರೆಗೆ ಅಭಿಯಾನ ಹಮ್ಮಿಕೊಂಡಿದ್ದು ಈ ಅವಧಿಯೊಳಗೆ ಸಂಬಂಧಪಟ್ಟ ಶಾಲೆ-ಕಾಲೇಜಿನವರು, ಅಧಿಕಾರಿಗಳು ಖಾತೆ ಮಾಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಶಿಕ್ಷಣ ಸಂಸ್ಥೆಗಳಿಗೆ ಸೇರಿದ ನಿವೇಶನ, ಭೂಮಿಯನ್ನು ಶೈಕ್ಷಣಿಕ ಸಂಸ್ಥೆಗಳ ಹೆಸರಿಗೆ ಖಾತೆ ಮಾಡಿಕೊಳ್ಳಲು ಈಗಾಗಲೇ ಕ್ರಮ ಕೈಗೊಳ್ಳಲಾಗಿತ್ತು. ಯಾವುದೇ ಜಿಲ್ಲೆಯಲ್ಲಿ ಖಾತೆ ಮಾಡಿಕೊಳ್ಳದೆ ಇದ್ದರೆ ಅಂತಹವರು ಸೆಪ್ಟೆಂಬರ್ನೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಖಾತೆಗಳ ವಿವರವನ್ನು ಸ್ಯಾಟ್ಸ್ ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.