- ಡಾ. ಶೇಖರ ಅಜೆಕಾರು ಹೇಳಿಕೆ
NAMMUR EXPRESS NEWS
ಹೆಬ್ರಿ : ಕದಿಯಲಾಗದ ವಿದ್ಯೆ, ಬದುಕು ಕಟ್ಟುವ ವಿದ್ಯೆ ಎಲ್ಲರಿಗೂ ಸಿಗಬೇಕಿದೆ. ಆ ಮೂಲಕ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಹೆಬ್ರಿಯ ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯು ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತಿದೆ. ಸಾಹಿತ್ಯದಿಂದ ಬದುಕಿಗೆ ಬೆಳಕಾಗಲಿ, ಸಂಸ್ಥೆಯೂ ಬೆಳಗಲಿ ಎಂದು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸಾಹಿತಿ ಡಾ. ಶೇಖರ ಅಜೆಕಾರು ಹೇಳಿದರು. ಹೆಬ್ರಿಯ ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜು.30ರಂದು ಕನ್ನಡ ಸಾಹಿತ್ಯ ಸಂಘ ಹಾಗೂ ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಇಂದು 100ರೊಂದಿಗೆ ಸೆಣಸಾಟ ಮಾಡಬೇಕಿದೆ, ನಮಗೆ ನಾವೇ ಆದರ್ಶವಾಗಿ ವಿದ್ಯೆಯ ಮೂಲಕ ಬದುಕನ್ನು ಕಟ್ಟಿಕೊಂಡು ಅತ್ಯಂತ ಸರಳ ಜೀವನ ನಡೆಸಬೇಕಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ಎಸ್. ಆರ್. ಸಂಸ್ಥೆಯಲ್ಲಿ ಕಲಿಯುವ ಭಾಗ್ಯ ದೊರೆತ ತಾವೆಲ್ಲ ಭಾಗ್ಯವಂತರು. ಆ ಪುಣ್ಯದ ಫಲದಿಂದ ವಿಶೇಷ ಸಾಧನೆ ಮಾಡಬೇಕಿದೆ, ಹುಟ್ಟುವಾಗ ನಾವು ವಿಶ್ವ ಮಾನವರಾಗಿದ್ದೆವು, ಈಗ ಅಲ್ಪಮಾನವರಾಗುತ್ತಿರುವುದು ದುರಂತ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಬ್ರಿ ಎಸ್. ಅರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ ಯಶಸ್ಸಿನ ಹಿಂದೆ ಪರಿಶ್ರಮದ ಬೆಲೆಯಿದೆ, ಯಶಸ್ಸಿಗಾಗಿ ಕಷ್ಟ ಪಡಬೇಕು. ಎಲ್ಲರ ಜತೆ ಬೆರೆತಾಗ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ. ಪ್ರತಿಭೆಗೆ ವೇದಿಕೆ ಸಿಗಲು ತಾಳ್ಮೆ ಹಾಗೂ ಏಕಾಗ್ರತೆ ಬಹುಮುಖ್ಯ ಎಂದರು.
ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ವರ್ಷಾ ಸಿ. ಶೆಟ್ಟಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ದೀಪಕ್ ಎನ್. ದುರ್ಗ ಉಪಸ್ಥಿತರಿದ್ದರು. ದೀಪಕ್ ದುರ್ಗಾ ಸ್ವಾಗತಿಸಿ, ಆಕಾಂಕ್ಷ ಅತಿಥಿಗಳ ಪರಿಚಯ ವಾಚಿಸಿದರು. ಅಮೃತ ನಿರೂಪಿಸಿ ಕೀರ್ತನಾ ವಂದಿಸಿದರು