5,8, 9ನೇ ತರಗತಿ ಪಬ್ಲಿಕ್ ಪರೀಕ್ಷೆಯ ಗೊಂದಲ ನಿವಾರಣೆ
– ಹೈಕೋರ್ಟ್ ಗ್ರೀನ್ ಸಿಗ್ನಲ್
– ಸೋಮವಾರದಿಂದ 5 8 9ನೇ ತರಗತಿಗೆ ಎಕ್ಸಾಂ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ 11ರಂದು ಆರಂಭವಾಗಿದ್ದು ಮಧ್ಯದಲ್ಲೇ ತಡೆಹಿಡಿಯಲ್ಪಟ್ಟ 5,8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆ ಯನ್ನು ಮುಂದುವರಿಸಲು ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಪಬ್ಲಿಕ್ ಪರೀಕ್ಷೆ ನಡೆಸುವ ಶಿಕ್ಷಣ ಇಲಾಖೆಯ ಸುತ್ತೋಲೆಯನ್ನು ರದ್ದುಗೊಳಿಸಿದ್ದ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಹೈಕೋರ್ಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ನ ವಿಭಾಗೀಯ ಪೀಠ ಎತ್ತಿಹಿಡಿದಿದೆ.bಸುದೀರ್ಘ ವಿಚಾರಣೆ ನಡೆಸಿದ ನ್ಯಾ. ಸೋಮಶೇಖರ್ ಹಾಗೂ ನ್ಯಾ.ರಾಜೇಶ್ ರೈ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಬೋರ್ಡ್ ಎಕ್ಸಾಂಗೆ ಅಸ್ತು ಎಂದಿರುವ ಜತೆಗೇ ಉಳಿದ ವಿಷಯಗಳ ಪರೀಕ್ಷೆ ನಡೆಸಲು ಸೂಕ್ತ ಮತ್ತು ತುರ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಿತು.
ಸೋಮವಾರದಿಂದಲೇ ಪರೀಕ್ಷೆ: ಸರ್ಕಾರ ಹೇಳಿಕೆ
5, 8 ಮತ್ತು 9ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಸೋಮವಾರದಿಂದಲೇ ನಡೆಸುವ ಬಗ್ಗೆ ಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ. ಈಗಾಗಲೇ ಐದನೇ ತರಗತಿ ನಾಲ್ಕು ವಿಷಯಗಳ ಪರೀಕ್ಷೆ ಮುಗಿದಿವೆ. 8 ಹಾಗೂ 9 ತಗರತಿಗಳ ಎರಡೆರಡು ವಿಷಯಗಳ ಪರೀಕ್ಷೆ ನಡೆದಿವೆ. 11ನೇ ತರಗತಿ ಎಲ್ಲಾ ವಿಷಯಗಳ ಪರೀಕ್ಷೆ ಮುಕ್ತಾಯವಾಗಿದ್ದು ಫಲಿತಾಂಶ ಹೊರ ಬರಬೇಕಿದೆ. ಮಾರ್ಚ್ 13ರಂದು ಸುಪ್ರೀಂಕೋರ್ಟ್ ಈ ಪರೀಕ್ಷೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಸೂಚಿಸಿತ್ತು. ಅದರನುಸಾರವಾಗಿ ಈಗ ತೀರ್ಪು ಬಂದಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸುತ್ತಿರುವ ಈ ಪರೀಕ್ಷೆ ಮಾರ್ಚ್ 11ರಂದು ಆರಂಭಗೊಂಡು ಮಾರ್ಚ್ 18ಕ್ಕೆ ಮುಗಿಯಬೇಕಾಗಿತ್ತು.
ಮಾರ್ಚ್ 12ರಂದು ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿ ಹೈಕೋರ್ಟ್ಗೆ ಹೋಗುವಂತೆ ಸೂಚಿಸಿದಾಗ ಸರ್ಕಾರ ತಕ್ಷಣವೇ ಹೈಕೋರ್ಟ್ ಬಾಗಿಲು ತಟ್ಟುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಈ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಯದ ಶಿಕ್ಷಣ ಇಲಾಖೆ ಮತ್ತು ಅಧಿಕಾರಿಗಳು ಒಂದೆರಡು ದಿನ ತಡವಾಗಿ ಹೈಕೋರ್ಟ್ ಮೊರೆ ಹೊಕ್ಕಿದ್ದರು. ಇದೀಗ ಹೈಕೋರ್ಟ್ನಲ್ಲಿ ಕಳೆದ ಕೆಲವು ದಿನಗಳಿಂದ ವಿಚಾರಣೆ ನಡೆಯುತ್ತಿದೆ. ಶಿಕ್ಷಣ ಇಲಾಖೆಗೆ ಪಬ್ಲಿಕ್ ಪರೀಕ್ಷೆ ನಡೆಸುವ ಅಧಿಕಾರವಿಲ್ಲ ಮತ್ತು ಅದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ ಎಂಬ ವಾದದೊಂದಿಗೆ ಖಾಸಗಿ ಶಾಲೆಗಳ ಸಂಘಟನೆ ರುಪ್ಸಾ ವಾದ ಮಂಡಿಸುತ್ತಿದೆ. ಈ ಬಗ್ಗೆ ಹೈಕೋರ್ಟ್ನಲ್ಲಿ ನಡೆದ ವಿಚಾರಣೆಯ ಸಂದರ್ಭ ಎರಡೂ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್, ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರನ್ನು ಒಳಗೊಂಡ ವಿಭಾಗೀಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಶುಕ್ರವಾರ ಈ ಬಗ್ಗೆ ತೀರ್ಪು ನೀಡಿದೆ.