ಡಿಸೆಂಬರ್ ವೇಳೆಗೆ ಶಾಲೆಗಳಲ್ಲಿ ಭಗವದ್ಗೀತೆ
- ಸರ್ಕಾರಿ ಶಾಲೆಗಳಲ್ಲಿ ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ: ಬಿ.ಸಿ.ನಾಗೇಶ್ ಮಾಹಿತಿ
NAMMUR EXPRESS NEWS
ಬೆಂಗಳೂರು: ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ನೈತಿಕ ಶಿಕ್ಷಣ ಪಠ್ಯದಲ್ಲಿ ಭಗವದ್ಗೀತೆ ಬೋಧನೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿಯ ಪ್ರಾಣೇಶ್ ಹಾಗೂ ರವಿಕುಮಾರ್ ಪ್ರಶ್ನೆಗೆ ಉತ್ತರ ನೀಡಿದ ಅವರು, ಶಾಲಾ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆ ಪ್ರತ್ಯೇಕವಾಗಿ ಬೋಧಿಸುವ ವಿಚಾರ ಸರ್ಕಾರದ ಮುಂದೆ ಇಲ್ಲ. ಆದರೆ ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡುತ್ತೇವೆ. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡುತ್ತೇವೆ. ಡಿಸೆಂಬರ್ ವೇಳೆಗೆ ನೈತಿಕ ಶಿಕ್ಷಣ ಶಾಲೆಗಳಲ್ಲಿ ಜಾರಿಗೆ ತರುತ್ತೇವೆ ಎಂದರು.
ಈ ವೇಳೆ ಮಾತನಾಡಿದ ಸದಸ್ಯ ಪ್ರಾಣೇಶ್ ಶಾಲಾ ಪಠ್ಯಪುಸ್ತಕದಲ್ಲಿ ಭಗದ್ಗೀತೆ ಬೋಧಿಸುವ ಪ್ರಸ್ತಾಪ ಇಲ್ಲ ಅಂತ ಸರ್ಕಾರ ಹೇಳುತ್ತಿದೆ. ಹಿಂದೆ ಸರ್ಕಾರ ಭಗದ್ಗೀತೆ ಬೋಧನೆ ಮಾಡಲು ಸಮಿತಿ ರಚನೆ ಮಾಡುವುದಾಗಿ ಹೇಳಿತ್ತು. ಸರ್ಕಾರಕ್ಕೆ ಭಗವದ್ಗೀತೆ ಬೋಧಿಸಲು ಮುಜುಗರ ಇದೆಯಾ? ಇದಕ್ಕೆ ಯಾರ ವಿರೋಧವೂ ಇರುವುದಿಲ್ಲ. ಮೊದಲು ಇದ್ದ ಆಸಕ್ತಿ ಇದ್ದಕ್ಕಿದ್ದಂತೆ ಈಗ ಯಾಕಿಲ್ಲ ಅಂತ ಪ್ರಶ್ನೆ ಮಾಡಿದರು. ಅಲ್ಲದೇ ಬಾಬಾ ಬುಡನ್ ಗಿರಿಗೆ ದತ್ತಾಪೀಠ ಅಂತ ಹೆಸರು ಇಡಬೇಕು ಅಂತ ಒತ್ತಾಯ ಮಾಡಿದರು.
ಇದಕ್ಕೆ ಉತ್ತರ ನೀಡಿದ ಸಚಿವರು, ಪಠ್ಯದಲ್ಲಿ ಸೇರ್ಪಡೆ ಇಲ್ಲ ಅಂತ ಹೇಳಿದ್ದೇವೆ. ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡುತ್ತೇವೆ. ಡಿಸೆಂಬರ್ ವೇಳೆಗೆ ನೈತಿಕ ಶಿಕ್ಷಣ ಶಾಲೆಗಳಲ್ಲಿ ಪ್ರಾರಂಭ ಮಾಡುತ್ತೇವೆ. ಇತಿಹಾಸದ ತಪ್ಪುಗಳನ್ನು ಪಠ್ಯದಲ್ಲಿ ಸರಿ ಮಾಡುವ ಕೆಲಸ ಮಾಡ್ತಿದ್ದೇವೆ. ಬಾಬಾ ಬುಡನ್ ಗಿರಿ ಹೆಸರು ಈಗಾಗಲೇ ದತ್ತಾತ್ರೇಯ ಪೀಠ ಅಂತ ಬದಲಾವಣೆ ಮಾಡಲಾಗಿದೆ ಅಂತ ತಿಳಿಸಿದರು.