ಎಸ್.ಡಿ.ಎಮ್ ಮಂಗಳೂರಿಗೆ ಚಾಂಪಿಯನ್ಸ್!
– ನಿಟ್ಟೆಯಲ್ಲಿ ಎನ್-ಇಗ್ಮಾ2024 ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ
– 400ಕ್ಕೂ ಹೆಚ್ಚು ಸ್ಪರ್ಧಿಗಳ ವಿವಿಧ ಸಾಂಸ್ಕೃತಿಕ ಝಲಕ್
NAMMUR EXPRESS NEWS
ನಿಟ್ಟೆ: ಡಾ.ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜು ನಿಟ್ಟೆ ಇತ್ತೀಚೆಗೆ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮಂಗಳೂರಿನ ಎಸ್.ಡಿ.ಎಮ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು ಮತ್ತು ಸಮಗ್ರ ರನ್ನರ್ಸ್ ಪ್ರಶಸ್ತಿಯನ್ನು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಪಡೆದುಕೊಂಡಿತು. ಸ್ಪರ್ಧೆಯ ಸಮಾರೋಪ ಸಮಾರಭದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಆಫ್ ಕ್ಯಾಂಪಸ್ ನ ಮೈಟೆನೆನ್ಸ್ & ಡೆವಲಪ್ಮೆಂಟ್ ವಿಭಾಗದ ನಿರ್ದೇಶಕ ಯೋಗಿಶ್ ಹೆಗ್ಡೆ ಅವರು ಭಾಗವಹಿಸಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ 400ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ‘ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದಷ್ಟು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಸಧೃಡರಾಗುತ್ತಾರೆ. ಕಾಲೇಜುಗಳು ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು, ಜೊತೆಗೆ ವಿದ್ಯಾರ್ಥಿಗಳು ಸ್ವತಃ ತಮ್ಮನ್ನು ತಾವೇ ಪಠ್ಯೇತರ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ. ಮಾತನಾಡಿ ‘ಸ್ಪರ್ಧೆಗಳಲ್ಲಿ ವಿಜೇತರಾಗುವುದಕ್ಕಿಂತಲೂ ಭಾಗವಹಿಸುವುದು ಮುಖ್ಯ, ಸ್ಪರ್ಧೆಗಳು ಕೇವಲ ಗೆಲ್ಲುವುದಕ್ಕಾಗಿ ಇರುವುದಲ್ಲ ಅವು ನಮ್ಮ ಪ್ರತಿಭೆಯನ್ನು ಪ್ರತಿನಿಧಿಸುವುದಕ್ಕೆ ಇರುವ ಅವಕಾಶ. ಹಾಗಾಗಿ ಇಂತಹ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮತ್ತು ವಿಜೇತರಾದವರನ್ನು ಅಭಿನಂದಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಮೇಶ್ ಎಂ, ಐಕ್ಯೂಎಸಿ ಸಂಯೋಜಕರಾದ ಪ್ರಕಾಶ್, ವಿದ್ಯಾರ್ಥಿ ಪರಿಷತ್ ಸಂಯೋಜಕಿ ರೇಖಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಪರಿಷತ್ ಸಂಯೋಜಕಿ ಮಾಲಿನಿ ಜೆ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ದೃಷ್ಟಿ ವಿ ಬಾಳಿಗ ಪ್ರಶಸ್ತಿ ವಿಜೆತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಶ್ರೀಷಾ ಯು ಪೈ ವಂದಿಸಿದರು. ವಿದ್ಯಾರ್ಥಿನಿ ಸಿಂಚನಾ ಆರ್ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.