ಶಾಲೆ ಆರಂಭಕ್ಕೆ ಮಕ್ಕಳು, ಶಾಲೆ ಸಜ್ಜು!
– ಮೇ 31ಕ್ಕೆ ಕರ್ನಾಟಕದಲ್ಲಿ ಆರಂಭೋತ್ಸವ
– 2 ದಿನ ಮೊದಲು ಶಾಲೆಗಳಲ್ಲಿ ಸಿದ್ದತೆ
NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ಖಾಸಗಿ ಶಾಲೆಗಳು ತರಗತಿಗಳನ್ನು ಆರಂಭಿಸಿ ಗೊಂದಲ ಸೃಷ್ಟಿಯಾಗಿರುವ ನಡುವೆಯ ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ದಿನಾಂಕವನ್ನು ಪ್ರಕಟಿಸಿದೆ. ಮೇ 29ರಿಂದಲೇ ಶಿಕ್ಷಕರು ಶಾಲೆಗೆ ಆಗಮಿಸಬೇಕು. ಮೇ 30 ರವರೆಗೆ ಶಾಲೆಯನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ಪ್ರಾರಂಭೋತ್ಸವಕ್ಕೆ ಎರಡು ದಿನ ಸಿದ್ದತೆ ಮಾಡಿಕೊಳ್ಳಬೇಕು. ಮೇ 31 ರಂದು ಶಾಲಾ ಆರಂಭೋತ್ಸವವನ್ನು ವಿಜೃಂಭಣೆಯಿಂದ ಮಾಡಬೇಕು. ಸರ್ಕಾರಿ, ಖಾಸಗಿ, ಅನುದಾನ ಹಾಗೂ ಅನುದಾನ ರಹಿತ ಶಾಲೆಗಳೆಲ್ಲಾ ಮೇ 31ರಿಂದ ಶಾಲೆಗಳನ್ನು ಆರಂಭಿಸಬೇಕು ಎನ್ನುವ ಸೂಚನೆಯನ್ನು ಈಗಾಗಲೇ ನೀಡಲಾಗಿದೆ.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಆಯುಕ್ತರಾದ ಬಿ.ಬಿ.ಕಾವೇರಿ ಅವರು ಅಧಿಕೃತ ಆದೇಶವನ್ನು ಹೊರಡಿಸಿದ್ದು, ಶಾಲೆಗಳಲ್ಲಿ ತಯಾರಿಗೆ ಯೋಜನೆ ರೂಪಿಸಲಾಗುತ್ತಿದೆ. ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಈಗಾಗಲೇ ಆದೇಶವನ್ನು ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ರವಾನಿಸಿ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳುತ್ತಾರೆ. ಖಾಸಗಿ ಶಾಲೆಗಳು ಈಗಾಗಲೇ ಪ್ರವೇಶಾತಿ ನೆಪದಲ್ಲಿ ಆರಂಭಿಸಿವೆ. ಬೆಂಗಳೂರು, ಮೈಸೂರು ಸಹಿತ ಹಲವು ಕಡೆ ತರಗತಿ ನಡೆಯುತ್ತಿದ್ದು, ಇದನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.