- ವಿದ್ಯಾರ್ಥಿಗಳ ಜತೆ ದೀಪಾವಳಿ, ತುಳಸಿ ಹಬ್ಬದ ಆಚರಣೆ
- ದೀಪದ ಬೆಳಕಿನಲ್ಲಿ ಮಿಂದೆದ್ದ ಕ್ರಿಯೇಟಿವ್ ಕಾಲೇಜು
NAMMUR EXPRESS NEWS
ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ದೀಪಾವಳಿ ಮತ್ತು ತುಳಸಿ ಪೂಜಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದ್ದು ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸುವ ಬಹು ದೊಡ್ಡ ಜವಾಬ್ದಾರಿಗೂ ಸೈ ಎಂದು ಸಂಸ್ಥೆ ತೋರಿಸಿತು.
ಕಾಲೇಜಿನಲ್ಲಿ ಮಕ್ಕಳ ಜತೆಗೆ ಎಲ್ಲಾ ಬೋಧಕರು, ಸಿಬ್ಬಂದಿ, ಮನೆಯಲ್ಲಿ ಹಬ್ಬ ಆಚರಿಸಿದಂತೆ ಹಬ್ಬವನ್ನು ಒಟ್ಟಾಗಿ ಆಚರಿಸಿದರು.
ಹಬ್ಬಗಳ ಮಹತ್ವ ತಿಳಿಸಿದ ಪ್ರಾಂಶುಪಾಲರು:
ವಿದ್ಯಾರ್ಥಿಗಳಲ್ಲಿ ನಮ್ಮ ಪರಂಪರೆ, ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಯಲು ಮತ್ತು ಹಬ್ಬಗಳ ಮಹತ್ವ ತಿಳಿಯಲು ಭಾರತೀಯ ಪರಂಪರೆಯ ಹಬ್ಬಗಳು ಮಾದರಿಯಾಗಿವೆ ಎಂದು ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ತಿಳಿಸಿದರು.
ಸಂಸ್ಥಾಪಕರಲ್ಲೊಬ್ಬರಾದ ಅಶ್ವಥ್ ಎಸ್ ಎಲ್ ಮಾತನಾಡಿ ಭಾರತೀಯ ಹಬ್ಬಗಳು ವೈಜ್ಞಾನಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವ ಹೊಂದಿದೆ. ಆಧ್ಯಾತ್ಮಿಕವಾಗಿ ನೋಡಿದಾಗಲು ಶ್ರೇಷ್ಠ ಮೌಲ್ಯಗಳ ಪ್ರತೀಕವಾಗಿವೆ. ಎಲ್ಲರಲ್ಲೂ ಹಬ್ಬವು ಸಾಮರಸ್ಯವನ್ನು ತರಲಿ ಎಂದು ಹಾರೈಸಿದರು.
ಸಂಸ್ಥೆಯ ಸಂಸ್ಥಾಪಕರುಗಳಾದ ಡಾ. ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ. ಕೆ, ವಿಮಲ್ ರಾಜ್, ಗಣಪತಿ ಕೆ ಎಸ್ ಹಾಗೂಉಪನ್ಯಾಸಕ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾದರು.
ಸಾಂಪ್ರದಾಯಿಕ ಉಡುಗೆ ತೊಡುಗೆಯ ಅಂದ ಚಂದ!
ದೀಪಾವಳಿ ಮತ್ತು ತುಳಸಿ ಪೂಜಾ ಹಬ್ಬದ ಅಂಗವಾಗಿ
ಕಾಲೇಜಿನ ವಿದ್ಯಾರ್ಥಿಗಳು ಭಾರತೀಯ ಪರಂಪರೆಯನ್ನು ಬಿಂಬಿಸುವ ಉಡುಗೆ-ತೊಡುಗೆಗಳನ್ನು ಧರಿಸಿ ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎಲ್ಲರ ಮೊಗದಲ್ಲಿ ಮನೆಯಲ್ಲಿನ ಹಬ್ಬದ ವಾತಾವರಣ ಕಂಡು ಬಂತು. ಸಡಗರ ಸಂಭ್ರಮದಿಂದ ಪಟಾಕಿ ಸಿಡಿಸಿ ಹಬ್ಬ ಆಚರಿಸಿ ಖುಷಿಪಟ್ಟರು.
ದೀಪದ ಬೆಳಕಿನಲ್ಲಿ ಮಿಂದೆದ್ದ ಕ್ರಿಯೇಟಿವ್ ಕಾಲೇಜು!
ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಕ್ಯಾಂಪಸ್ ಬೆಳಕಿನ ಅಲಂಕಾರದಲ್ಲಿ ಮಿಂದೆದ್ದಿತು. ಕಾಲೇಜಿನ ಆವರಣದಲ್ಲಿ ದೀವಟಿಗೆ ಬೆಳಕಿನಲ್ಲಿ ಬಾಣ-ಬಿರುಸು, ಪಟಾಕಿ, ನಕ್ಷತ್ರ ಕಡ್ಡಿಗಳು, ಸುಡುಮದ್ದು ಪ್ರದರ್ಶನ ನಡೆಯಿತು. ವಿದ್ಯಯ ಜತೆಗೆ ಭಾರತೀಯ ಸಂಪ್ರದಾಯಿಕ ಹಬ್ಬದ ಆಚರಣೆ ಮಕ್ಕಳಿಗೆ ಬದುಕಿನ ಪಾಠವನ್ನು ಹೇಳಿ ಕೊಟ್ಟಿತು.