ಶಾಲಾ ಮಕ್ಕಳಿಗೆ ಗುಡ್ ನ್ಯೂಸ್
– ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ
– ಶಿಕ್ಷಣ ಸಂಶೋಧನೆ, ತರಬೇತಿ ಇಲಾಖೆ ನಿರ್ದೇಶನ
NAMMUR EXPRESS NEWS
ಬೆಂಗಳೂರು: ಮಕ್ಕಳಿಗೆ ಶಾಲಾ ಬ್ಯಾಗ್ ಹೊರೆ ತಗ್ಗಿಸಲು ರಾಜ್ಯದ ಎಲ್ಲ ಶಾಲೆಗಳಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಪ್ರತಿ ತಿಂಗಳು ಒಂದು ಶನಿವಾರ ‘ಬ್ಯಾಗ್ ರಹಿತ ದಿನ’ ಆಚರಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ) ನಿರ್ದೇಶನ ನೀಡಿದೆ. ರಾಜ್ಯದ ಉರ್ದು ಶಾಲೆಗಳಲ್ಲಿ ಶನಿವಾರ ಪೂರ್ಣ ದಿನ ತರಗತಿಗಳು ನಡೆಯುವುದರಿಂದ ಅರ್ಧ ದಿನ ಮಾತ್ರ ತರಗತಿ ನಡೆಯುವ ಪ್ರತಿ ತಿಂಗಳ ಮೂರನೇ ಶುಕ್ರವಾರ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸುವಂತೆ ಸೂಚಿಸಲಾಗಿದೆ.
ಬ್ಯಾಗ್ ರಹಿತ ದಿನವನ್ನು ‘ಸಂಭ್ರಮ ಶನಿವಾರ’ ಎಂದು ಅನುಷ್ಠಾನಗೊಳಿಸಬೇಕು. ಈ ದಿನದ ವಿದ್ಯಾರ್ಥಿ ಚಟುವಟಿಕೆ ಹಾಗೂ ಶಿಕ್ಷಕರ ಕೈಪಿಡಿಯನ್ನು ಡಿಎಸ್ಇಆರ್ಟಿ ವೆಬ್ ಸೈಟ್ನಲ್ಲಿ dsert.karnataka.gov.in ನಲ್ಲಿ ಅಪ್ಲೋಡ್ ಮಾಡಲಾಗಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ, ಮಾಧ್ಯಮ ಮತ್ತು ಅಂತರ್ಜಾಲದ ಬಳಕೆ, ಪೌಷ್ಟಿಕತೆ, ಸ್ವಾಸ್ತ್ರ ಮತ್ತು ಶುಚಿತ್ವ, ಸಾರ್ವಜನಿಕ ನೈರ್ಮಲ್ಯ-ಘನತ್ಯಾಜ್ಯದ ನಿರ್ವಹಣೆ ಆರೋಗ್ಯ ಜೀವನ ಶೈಲಿ, ಸಾರ್ವಜನಿಕ ಸೌಕರ್ಯಗಳು ಮತ್ತು ನನ್ನ ಜವಾಬ್ದಾರಿ, ರಸ್ತೆ ಸುರಕ್ಷತೆ, ಹಿಂಸೆ, ಅಪ ರಾಧ, ಅಪಘಾತಗಳ ಸಂದರ್ಭಗಳಲ್ಲಿ ರಕ್ಷಣೆ ಹಾಗೂ ಭದ್ರತೆ, ಲಿಂಗ ಸಮಾನತೆಗೆ ಪ್ರೋತ್ಸಾಹ ನೀಡುವುದು ಪ್ರಮುಖ ಚಟುವಟಿಕೆಗಳಾಗಿವೆ. ಇವುಗಳ ಬಗ್ಗೆ ಪ್ರತಿ ತಿಂಗಳ ಮೂರನೇ ಶನಿವಾರ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕೆಂದು ಸೂಚಿಸಿದೆ.