ಬೈಂದೂರಲ್ಲಿ ಸರಕಾರಿ ಶಾಲೆ ದತ್ತು ಪಡೆದ ಗೋವಿಂದ ಬಾಬು ಪೂಜಾರಿ!
– ದುಡಿದ ಹಣದಲ್ಲಿ ಬಡ ಮಕ್ಕಳ ಶಿಕ್ಷಣ ಸೇವೆಗೆ ಅರ್ಪಣೆ
– ಬಿಜೂರು ಸರಕಾರಿ ಶಾಲಾ ದತ್ತು ಸ್ವೀಕಾರ, ಸಾಂಸ್ಕೃತಿಕ ಉತ್ಸವ ಸಂಭ್ರಮ
– ವಿನಯ್ ಗುರೂಜಿ, ಸಚಿವ ಮಧು ಬಂಗಾರಪ್ಪ, ಗಂಟೆಹೊಳೆ ಸೇರಿ ಅನೇಕ ಗಣ್ಯರು ಹಾಜರ್
– ಗೋವಿಂದ ಬಾಬು ಪೂಜಾರಿ ಅವರಿಂದ ಶಾಲಾ ವಾಹನ ಹಸ್ತಾಂತರ
NAMMUR EXPRESS NEWS
ಬೈಂದೂರು: ಚೆಫ್ ಟಾಕ್ ಕಂಪನಿ ಸಂಸ್ಥಾಪಕ, ಹೋಟೆಲ್ ಉದ್ಯಮಿ, ಸಮಾಜಸೇವಕ ಗೋವಿಂದ ಬಾಬು ಪೂಜಾರಿ ಅವರು ತಮ್ಮ ತವರು ಬೈಂದೂರು ತಾಲೂಕು ಬಿಜೂರು ಸರಕಾರಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಲ್ಲಿಗೆ ಶಾಲಾ ವಾಹನ ಹಸ್ತಾಂತರ ಮಾಡುವ ಮೂಲಕ ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ತಾವು ದುಡಿದ ಹಣದಲ್ಲಿ ಬಡ ಮಕ್ಕಳ ಶಿಕ್ಷಣ ಸೇವೆಗೆ ಅರ್ಪಣೆ ಮಾಡಿದ್ದಾರೆ. ಈಗಾಗಲೇ ತಮ್ಮ ದುಡಿಮೆ ಹಣದಲ್ಲಿ ಬಡವರಿಗೆ ಮನೆ ಕಟ್ಟಿ ಕೊಡುವ ಮೂಲಕ ರಾಜ್ಯದಲ್ಲಿ ಸೇವಾ ಕ್ಷೇತ್ರದಲ್ಲಿ ತಮ್ಮದೇ ಹೆಸರು ಮಾಡಿರುವ ಗೋವಿಂದ ಬಾಬು ಅವರ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಿಜೂರು ಸರಕಾರಿ ಶಾಲಾ ದತ್ತು ಸ್ವೀಕಾರ, ಸಾಂಸ್ಕೃತಿಕ ಉತ್ಸವ ಸಂಭ್ರಮ
ಸರಕಾರಿ ಶಾಲೆಯಲ್ಲಿ ಮಾತ್ರ ನೈಜ ಪ್ರತಿಭಾವಂತರು ಬೆಳೆಯುತ್ತಾರೆ. ನಾವು ಬೆಳೆದುಬಂದದನ್ನ ನೆನಪಿಟ್ಟುಕೊಳ್ಳುವವರು ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದುಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಬಿಜೂರು ಸರಕಾರಿ ಶಾಲಾ ದತ್ತು ಸ್ವೀಕಾರ ಹಾಗೂ ಸಾಂಸ್ಕೃತಿಕ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅವಧೂತ ವಿನಯ್ ಗುರೂಜಿ ಗೌರಿಗದ್ದೆ ಮಾತನಾಡಿ, “ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಬೇಕಾಗಿದೆ. ದುಡಿಮೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ದುಡಿಮೆಯಲ್ಲಿ ಕೈಗೊಳ್ಳುವ ಸಮಾಜ ಮುಖಿ ಸೇವೆ ಮಾತ್ರ ನಮ್ಮ ಇರುವಿಕೆಯನ್ನು ಶಾಶ್ವತಗೊಳಿಸು ತ್ತದೆ,” ಎಂದರು.
ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ್ಪುಂದ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಸ್ವೀಕರಿಸಿ ಮಾತನಾಡಿ, “ಶಾಲೆಯಲ್ಲಿ ಸೌಲಭ್ಯ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕೂಡ ಕ್ಷೀಣಿಸಿದೆ. ಹೀಗಾಗಿ ಶಿಕ್ಷಣಾಭಿಮಾನಿಗಳು ಹಾಗೂ ಶಾಲಾ ಆಡಳಿತ ಮಂಡಳಿ ದತ್ತು ಪಡೆಯುವ ಮೂಲಕ ಅಭಿವೃದ್ಧಿ ಸಹಕಾರ ಕೋರಿದ್ದರ ಪರಿಣಾಮ ನನಗೊಂದು ಅವಕಾಶ ದೊರೆತಿದೆ,” ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಉಡುಪಿ ವಿದ್ಯಾಂಗ ಉಪನಿರ್ದೇಶಕ ಗಣಪತಿ ಕೆ., ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ, ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷೆ ಶಾರದಾ ದೇವಾಡಿಗ, ಉಡುಪಿ ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಬೈಂದೂರು ವಲಯ ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಶೇಖರ್ ಪೂಜಾರಿ, ಬಿಜೂರು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವೇಶ್ವರ ಅಡಿಗ, ಸೊರಬ ಮುಖಂಡ ರಾಜಶೇಖರ್, ಡಿ.ಆರ್.ರಾಜು ಕಾರ್ಕಳ ಬಿಜೂರು ಸ.ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕ ಮಂಜುನಾಥ ಬಿಜೂರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿದ ಡಾ.ಗೋವಿಂದ ಬಾಬು ಪೂಜಾರಿ ದಂಪತಿಯನ್ನು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಮ್ಮಾನಿಸಲಾಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಜೂರು ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಅವರಿಂದ ಸರ್ಕಾರಿ ಶಾಲಾ ದತ್ತು ಸ್ವೀಕಾರ ಹಾಗೂ ಸಾಂಸ್ಕೃತಿಕ ಉತ್ಸವ ಸಮಾರಂಭ ಮಂಗಳವಾರ ಬಿಜೂರು ಶಾಲಾ ಆವರಣದಲ್ಲಿ ನಡೆಯಿತು. ಬಿಜೂರು ಶಾಲೆಯ ಉತ್ಸವ ಸಮಿತಿಯ ಸಂಚಾಲಕ ಶ್ರೀಧರ್ ಬಿಜೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ನಾಯ್ಕ ವಂದಿಸಿದರು.
ಕೊಡುಗೆಯಾಗಿ ಶಾಲಾ ವಾಹನ ಹಸ್ತಾಂತರ
ಶ್ರೀ ವರಲಕ್ಷ್ಮಿ ಚಾರಿಟರ್ಬಲ್ ಟ್ರಸ್ಟ್ ಉಪ್ಪುಂದ ಇದರ ಗೌರವಾಧ್ಯಕ್ಷರಾದ ಡಾ.ಗೋವಿಂದ ಬಾಬು ಪೂಜಾರಿಯವರು ಸರ್ಕಾರಿ ಶಾಲೆಯನ್ನು ದತ್ತು ಸ್ವೀಕರಿಸಿ ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಪಯುಕ್ತವಾಗಿರುವ ಶಾಲಾ ವಾಹನ ಕೊಡುಗೆಯಾಗಿ ಹಸ್ತಾಂತರ ಮಾಡಿ ಬಸ್ಸಲ್ಲಿ ಮಕ್ಕಳ ಜತೆ ಪಯಣಿಸಿದರು.