-ಆನ್ಲೈನ್ ಕ್ಲಾಸ್ನಿಂದ ಮಕ್ಕಳ ವರ್ತನೆ ಬದಲು
-ಕೊರೋನಾ ಟೈಂನಲ್ಲಿ ಮೊಬೈಲ್ ಬಲೆಗೆ ಬಿದ್ದ ಗಂಡೈಕಳು
ನಾಗರಾಜ್ ನವೀಮನೆ ಮೈಸೂರು
ಸತತ 9 ತಿಂಗಳಿನಿಂದ ಆನ್ಲೈನ್ ಕ್ಲಾಸ್ ಅಂಥ ಮನೆಯಲ್ಲೇ ಕಾಲ ಕಳೆದ ಮಕ್ಕಳ ನಡವಳಿಕೆಯಲ್ಲಿ ತುಸು ಬದಲಾವಣೆಯಾಗಿದೆ. ಪೋಷಕರ ಮಾತಿಗೆ ಬೆಲೆ ಕೂಡದೇ ಇರುವುದು, ರಾತ್ರಿ ಇಡೀ ಮೊಬೈಲ್ ನೋಡುತ್ತಾ, ನಿದ್ದೆಗೆಟ್ಟು ಮಕ್ಕಳು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾ ಇದ್ದಾರೆ ಎಂದು ಪೋಷಕರು ತಮ್ಮ ಅಳುಕನ್ನು ಹೇಳಿಕೊಳ್ಳುತ್ತಿದ್ದಾರೆ ಗಂಡು ಮಕ್ಕಳು ತುಸು ಪೋಲಿ ಹಾಗೂ ಉಡಾಳರಾಗಿದ್ದಾರೆ! ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲೆಗಳು ನಿಯೋಜಿಸಿರುವ ಕೆಲವು ಮನಶಾಸ್ತ್ರಜ್ಞರ ಬಳಿ -ಪಾಲಕರು ಹೊತ್ತು ತರುತ್ತಿರುವ ದೂರುಗಳಿವು ಗ್ರಾಮೀಣ ಭಾಗಕ್ಕಿಂತ ಹೆಚ್ಚಾಗಿ ನಗರದ ಭಾಗಗಳಲ್ಲಿ ಕಂಡು ಬರುತ್ತಿದ್ದು, ಅದರಲ್ಲೂ ಉದ್ಯೋಗಸ್ಥ ದಂಪತಿಗೆ ಇದೊಂದು ತಲೆನೋವಾಗಿ ಪರಿಣಮಿಸಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಕ್ಕಳು ಮೊಬೈಲ್ನಲ್ಲೇ ತಮಗಿಷ್ಟ ಬಂದ ಸಂಗತಿಯನ್ನು ಬ್ರೌಸ್ ಮಾಡುತ್ತಿದ್ದಾರೆ. ಇದರಿಂದ ನಿತ್ಯ ತಮ್ಮ ಬಳಿ ಎಡತಾಕುವ ಪಾಲಕರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ ಎನ್ನುತ್ತಾರೆ ಮನಶಾಸ್ತ್ರಜ್ಞರು.
ಕೋವಿಡ್ನಿಂದ ಆನ್ಲೈನ್ ತರಗತಿ ಎಲ್ಲೆಡೆ ಶುರುವಾಯಿತು. ಇದರಿಂದ ಪಾಲಕರು ಎಸ್ಸೆಸ್ಸೆಲ್ಸಿ ಹಾಗೂ ಪಿಯು ಮಕ್ಕಳಿಗೆ ಆಂಡ್ರಾಯ್ಡ್ ಹಾಗೂ ಟ್ಯಾಬ್ ಕೊಡಿಸಿದ್ದಾರೆ. ಮೊಬೈಲ್ ತಂದ ಅವಾಂತರ ಇದೀಗ ಅನಾವರಣಗೊಳ್ಳುತ್ತಿದೆ. ಆನ್ಲೈನ್ ತರಗತಿ ನೆಪದಲ್ಲಿ ಮಕ್ಕಳು ದಿನಪೂರ್ತಿ ಮೊಬೈಲ್ನಲ್ಲೇ ಮುಳುಗುವುದನ್ನು ರೂಢಿಸಿಕೊಂಡಿದ್ದಾರೆ.
ರಾತ್ರಿಪೂರ್ತಿ ಚಾಟ್ ಮಾಡುತ್ತಿರುತ್ತಾರೆ. ವಯೋಸಹಜ ಕೂತೂಹಲಕ್ಕೆ ಅಶ್ಲೀಲ ವೆಬ್ಸೈಟ್ ಸರ್ಚ್ ಮಾಡುತ್ತಿದ್ದಾರೆ. ಬೆಳಗ್ಗೆ ತಡವಾಗಿ ಏಳುತ್ತಾರೆ. ಟೆಸ್ಟ್ಗೆ ಓದಿಕೋ ಎಂದರೆ ನಿರ್ಲಕ್ಷಿಸುತ್ತಾರೆ ಎಂದು ಕೆಲ ಪೋಷಕರು ಮನಶಾಸ್ತ್ರಜ್ಞರ ಬಳಿ ಆತಂಕ ತೋಡಿಕೊಂಡಿದ್ದಾರೆ.