ಮಕ್ಕಳ ಮೆದುಳು ಡೌನ್ ಮಾಡುತ್ತೆ ಮೊಬೈಲ್!
- –ಪೋಷಕರೇ ಎಚ್ಚರ
ಬೆಂಗಳೂರು : ಮಕ್ಕಳು ಮೊಬೈಲನ್ನು ಅತಿ ಹೆಚ್ಚು ಬಳಸುವುದರಿಂದ ಅವರ ಮೆದುಳು ನಿಷ್ಕ್ರಿಯಗೊಳ್ಳುತ್ತದೆ ಎಂಬ ಆತಂಕ ಹುಟ್ಟಿಸುವ ಮೆಸೇಜ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈಗ ಆನ್ಲೈನ್ ಶಿಕ್ಷಣವು ಸರ್ವವ್ಯಾಪಿ ಆಗಿರುವ ಸಂದರ್ಭದಲ್ಲಿ ಈ ಸಂದೇಶ ಅನೇಕ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಆದರೆ ಮೊಬೈಲ್ನ ಅತಿ ಬಳಕೆಯಿಂದ ಮಕ್ಕಳ ಮೇಲೆ ಕೆಲ ಅಡ್ಡ ಪರಿಣಾಮ ಉಂಟಾಗಬಹುದಾಗಿದ್ದರೂ ಮೆದುಳು ನಿಷ್ಕ್ರಿಯಗೊಳ್ಳುವಂತಹ ಗಂಭೀರ ಸಮಸ್ಯೆ ತಲೆದೋರುವ ಸಾಧ್ಯತೆಗಳಿಲ್ಲ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಮೆದುಳಿಗೆ ಆಮ್ಲಜನಕ ಅಥವಾ ರಕ್ತದ ಪೂರೈಕೆ ಸ್ಥಗಿತಗೊಂಡ ಸಂದರ್ಭದಲ್ಲಿ ಮೆದುಳು ನಿಷ್ಕ್ರೀಯಗೊಳ್ಳುತ್ತದೆ. ಆದರೆ ಮೊಬೈಲ್ ಬಳಕೆಯಿಂದ ಇಷ್ಟೊಂದು ಗಂಭೀರ ಸಮಸ್ಯೆ ತಲೆದೋರುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ವೈದ್ಯಕೀಯ ವಿಜ್ಞಾನ ಇದನ್ನು ಪುಷ್ಟೀಕರಿಸುವುದಿಲ್ಲ. ಆದರೆ ಯಾವುದನ್ನೇ ಅತಿಯಾಗಿ ಮಾಡಿದರೂ ಅಡ್ಡ ಪರಿಣಾಮಗಳಿರುವುದು ಸಹಜ. ಅದೇ ನಿಯಮ ಮೊಬೈಲ್ಗೂ ಅನ್ವಯಿಸುತ್ತದೆ ಎಂದು ಮನೋವೈದ್ಯರು ಮತ್ತು ಮಕ್ಕಳ ತಜ್ಞರು ಹೇಳುತ್ತಾರೆ.