ವಿದ್ಯಾರ್ಥಿಗಳ ಮೊಬೈಲ್ ಬಳಕೆ ನಿಷೇಧ ಸಾಧ್ಯತೆ?!
– ಶಿಕ್ಷಣ ಸಚಿವ ಮಧು ಬಂಗಾರಪ್ಪರನ್ನ ಭೇಟಿ ಮಾಡಿದ ಆಯೋಗ
– ಯುವ ಜನತೆಯ ಬದುಕನ್ನೇ ಬಲಿ ಪಡೆಯುತ್ತಿರುವ ಮೊಬೈಲ್?
NAMMUR EXPRESS NEWS
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಮೊಬೈಲ್ ಮೊಬೈಲ್ ಬಳಕೆ ಹೆಚ್ಚುತ್ತಿದ್ದು, ಫೋನ್ಗಳು ಮತ್ತು ಸೈಬರ್ ಅಪರಾಧದಿಂದ ವಿದ್ಯಾರ್ಥಿಗಳ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್ಪಿಸಿಆರ್) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿದೆ.
ಈ ಮೂಲಕ ರಾಜ್ಯದ ಮಕ್ಕಳ ಭವಿಷ್ಯದ ಬಗ್ಗೆ ಚರ್ಚೆ ಮಾಡಲು ಮನವಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮಕ್ಕಳು, ವಿದ್ಯಾರ್ಥಿಗಳು, ಯುವ ಜನರು ಮೊಬೈಲ್ ಬಳಕೆ ಅವರ ಬದುಕನ್ನು ಬಲಿ ಪಡೆಯುತ್ತಿದೆ ಎಂಬ ಚರ್ಚೆ ನಡುವೆ ಆಯೋಗದ ಭೇಟಿ ಮಹತ್ವ ಪಡೆದಿದೆ.
ಮಕ್ಕಳು ಸೈಬರ್ ಅಪರಾಧಕ್ಕೆ ಒಡ್ಡಿಕೊಳ್ಳುವುದು ಹಾಗೂ ಅತಿಯಾದ ಇಂಟರ್ನೆಟ್ ಬಳಕೆಯಂತಹ ವಿಷಯಗಳನ್ನು ಒಳಗೊಂಡಿರುವ ಅಧ್ಯಯನದ ವಿವರಗಳಿಗೆ ಸಂಬಂಧಿಸಿದಂತೆ ಈ ಆಯೋಗ ಸಚಿವರನ್ನು ಸಂಪರ್ಕಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಅದರಂತೆ ಈ ಹಿಂದೆ ಕೆಎಸ್ಸಿಪಿಸಿಆರ್ ಅಧ್ಯಕ್ಷ ಕೆ ನಾಗಣ್ಣ ಗೌಡ ಅವರು ಮಕ್ಕಳಲ್ಲಿ ಮೊಬೈಲ್ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಮಕ್ಕಳು ಹೆಚ್ಚು ಸ್ಮಾರ್ಟ್ಫೋನ್ ಬಳಕೆ ಮಾಡುವ ಹಿನ್ನೆಲೆ ಮೆಮೊರಿ ನಷ್ಟದ ಸಮಸ್ಯೆ ಉಂಟಾಗುತ್ತದೆ ಎಂದು ಪ್ರತಿಪಾದಿಸಿದ್ದರು.
ಈ ನಡುವೆ ರಾಜ್ಯದಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳ ಹರಡುವಿಕೆಯನ್ನು ನಿಭಾಯಿಸಲು ಆಯೋಗವು ಚೈಲ್ಡ್ ಫಂಡ್ ಇಂಡಿಯಾದೊಂದಿಗೆ ಎಂಒಯುಗೆ ಸಹಿ ಹಾಕಿದೆ. ವಿಶೇಷವಾಗಿ ಆನ್ಲೈನ್ನಲ್ಲಿ ಮಕ್ಕಳ ಮೇಲಿನ ಶೋಷಣೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಅವಶ್ಯಕತೆ ಈಗ ತುಂಬಾ ಮಹತ್ವದ್ದಾಗಿದೆ ಎಂದು ಅಧ್ಯಕ್ಷ ನಾಗಣ್ಣಗೌಡ ಹೇಳಿದ್ದಾರೆ.
ಅತಿಯಾದ ಸ್ಮಾರ್ಟ್ಫೋನ್ ಬಳಕೆ ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಬಹುದು. ವಿಶೇಷವಾಗಿ ತರಗತಿಯ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಫೋನ್ಗಳನ್ನು ಶೈಕ್ಷಣಿಕೇತರ ಉದ್ದೇಶಗಳಿಗಾಗಿ ಬಳಕೆ ಮಾಡುವ ಸಾಧ್ಯತೆ ಹೆಚ್ಚು ಸಾಮಾಜಿಕ ಮಾಧ್ಯಮ, ಮೆಸೇಜಿಂಗ್ ಆಪ್ಗಳ ಬಳಕೆ, ಗೇಮಿಂಗ್ ವಿದ್ಯಾರ್ಥಿಗಳ ಗಮನವನ್ನು ಕಲಿಕೆಯಿಂದ ಬೇರೆಡೆಗೆ ಸೆಳೆಯುತ್ತದೆ. ಇದರಿಂದಾಗಿ ಅವರ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದೆಲ್ಲಕ್ಕೂ ಪ್ರಮುಖವಾಗಿ ಮೊಬೈಲ್ ಫೋನ್ಗಳ ಮೇಲಿನ ಹೆಚ್ಚಿದ ಅವಲಂಬನೆಯು ವಿದ್ಯಾರ್ಥಿಗಳಲ್ಲಿ ಮುಖಾಮುಖಿ ಸಂವಹನಗಳನ್ನು ಕಡಿಮೆ ಮಾಡಬಹುದು. ಈ ಮೂಲಕ ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಸಂವಹನ ಕೌಶಲ್ಯಗಳ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಇದರಿಂದಾಗಿ ಅವರ ನಡವಳಿಕೆಯೇ ಅದಲು ಬದಲಾಗುತ್ತದೆ.
ಮೊಬೈಲ್ ಬಳಕೆಯಿಂದ ಆರೋಗ್ಯ ಸಮಸ್ಯೆ!
ಹೆಚ್ಚಿನ ಸ್ಮಾರ್ಟ್ಫೋನ್ ಬಳಕೆಯು ವಿದ್ಯಾರ್ಥಿಗಳಲ್ಲಿ ಕಣ್ಣಿನ ಆಯಾಸ, ಕುತ್ತಿಗೆ ಮತ್ತು ಬೆನ್ನು ನೋವು, ಮತ್ತು ನಿದ್ರೆಯ ಸಮಸ್ಯೆಗಳನ್ನು ನಿರ್ಮಾಣ ಮಾಡುತ್ತದೆ. ಇಷ್ಟು ಮಾತ್ರವಲ್ಲದೆ ಇದರೊಂದಿಗೆ ವಿವಿಧ ಆರೋಗ್ಯ ಸಮಸ್ಯೆ ಸಹ ಕಾಣಿಸಿಕೊಳ್ಳುತ್ತವೆ. ಅದೆಲ್ಲಕ್ಕೂ ಪ್ರಮುಖವಾಗಿ ಜಡ ಜೀವನಶೈಲಿಗೆ ಇದು ಕಾರಣವಾಗಬಹುದು, ದೈಹಿಕ ಚಟುವಟಿಕೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.
ಸೈಬರ್ಬುಲ್ಲಿಂಗ್ ಮತ್ತು ಆನ್ಲೈನ್ ಸುರಕ್ಷತೆ:
ಮೊಬೈಲ್ ಫೋನ್ಗಳನ್ನು ವ್ಯಾಪಕವಾಗಿ ಬಳಸುವ ವಿದ್ಯಾರ್ಥಿಗಳು ಸೈಬರ್ಬುಲ್ಡಿಂಗ್, ಗೌಪ್ಯತೆ ಉಲ್ಲಂಘನೆ ಮತ್ತು ಸೂಕ್ತವಲ್ಲದ ವಿಷಯಕ್ಕೆ ಒಡ್ಡಿಕೊಳ್ಳುವುದು ಸೇರಿದಂತೆ ಆನ್ಲೈನ್ ಅಪಾಯಗಳಿಗೆ ಒಳಗಾಗುತ್ತಾರೆ. ಆನ್ಲೈನ್ ಸುರಕ್ಷತೆ ಮತ್ತು ಜವಾಬ್ದಾರಿಯುತ ಮೊಬೈಲ್ ಫೋನ್ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ.
ಖಾಸಗಿ ಬದುಕು ಹಾಳು, ಅಪರಾಧ ಹೆಚ್ಚಳ!
ಇತ್ತೀಚಿಗೆ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾ ಅತಿಯಾದ ಬಳಕೆಯಿಂದ ಯುವ ಜನತೆ ಖಾಸಗಿ ಬದುಕು ಕೂಡ ಹಾಳಾಗುತ್ತಿದೆ. ಪ್ರತಿ ದಿನ ಇಂತಹ ಪ್ರಕರಣ ವರದಿಯಾಗುತ್ತಿದೆ. ಜತೆಗೆ ಅಪರಾಧ ಪ್ರಕರಣ ಕೂಡ ಹೆಚ್ಚಾಗುತ್ತಿದೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023