- ಮೇ 16ರಿಂದ ಶಾಲೆಗಳು ಆರಂಭ: ಸರ್ವ ಸಿದ್ಧತೆ
- ತಳಿರು ತೋರಣ, ಅಲಂಕಾರದಿಂದ ಶಾಲೆ ಸಿಂಗಾರ
NAMMUR EXPRESS NEWS
ಬೆಂಗಳೂರು: 2022-23ನೇ ಸಾಲಿನ ಶಾಲೆಗಳು ಮೇ 16ರಿಂದ ಆರಂಭವಾಗಲಿದ್ದು, ಈ ವೇಳೆ ಸಕಲ ಸಿದ್ಧತೆ ಮಾಡಿಕೊಂಡು ಶಾಲೆ ಶುಭಾರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ಎಲ್ಲಾ ಶಾಲೆಗಳು ಸ್ವಚ್ಛಗೊಂಡಿದ್ದು ಮಕ್ಕಳು, ಶಿಕ್ಷಕರು, ಪೋಷಕರು ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದಾರೆ. ಶಾಲಾ ಆರಂಭಕ್ಕೂ ಮುನ್ನ ಶಾಲಾ ಹಂತದಲ್ಲಿ ಹಮ್ಮಿಕೊಳ್ಳಬೇಕಾದ ಪೂರ್ವ ಸಿದ್ಧತಾ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿ ಅದರಂತೆ ಎಲ್ಲ ಶಾಲೆಗಳ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಅಧಿಕಾರಿ ವರ್ಗ ಸಕ್ರಿಯವಾಗಿ ಭಾಗವಹಿಸುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಸೂಚನೆ ನೀಡಿತ್ತು.
ಶಾಲಾ ಪ್ರಾರಂಭದ ಮುನ್ನಾ ಶಾಲಾ ತರಗತಿ ಕೊಠಡಿಗಳು, ಕೋಣೆ, ಶೌಚಾಲಯ ಇತ್ಯಾದಿ ಗಳನ್ನು ಸ್ವಚ್ಛಇಟ್ಟುಕೊಳ್ಳಬೇಕು. ಶಾಲೆಯನ್ನು ತಳಿರು ತೋರಣ, ರಂಗೋಲಿಯಿಂದ ಅಲಂಕರಿಸಬೇಕು. ಮಧ್ಯಾಹ್ನ ಮಕ್ಕಳಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಪಾಲಕರು, ನಾಗರಿಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಶಾಲಾ ಹಬ್ಬದಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಮಾಡಬೇಕು. ಶಾಲಾ ಆರಂಭದ ದಿನ ಮಕ್ಕಳಿಗೆ ಸಿಹಿಯೂಟ ವ್ಯವಸ್ಥೆ ಮಾಡಬೇಕು. ತರಗತಿ ವೇಳಾಪಟ್ಟಿ ಶಿಕ್ಷಕರ ವೇಳಾಪಟ್ಟಿಯನ್ನು ತಯಾರಿ ಸಿಟ್ಟುಕೊಳ್ಳಬೇಕೆಂದು ಸೂಚಿಸಲಾಗಿದೆ. ಈಗ ಎಲ್ಲಾ ಸಿದ್ಧತೆ ನಡೆದಿದ್ದು ಮಕ್ಕಳನ್ನು ಸ್ವಾಗತಿಸಲು ಕ್ಷಣಗಣನೆ ಆರಂಭವಾಗಿದೆ.
ಅಧಿಕಾರಿಗಳಿಗೆ ಮಹತ್ವದ ಹೊಣೆ
ಶಾಲಾ ಆರಂಭದ ದಿನ ಅಕ್ಷರ ದಾಸೋಹ ಕಾರ್ಯ ಕ್ರಮ ಅನುಷ್ಠಾನ, ಮಕ್ಕಳ ದಾಖಲಾತಿ ಪ್ರಗತಿ, ಪ್ರೋತ್ಸಾಹದಾಯಕ ಯೋಜನೆಗಳ ಪೂರೈಕೆ ಕುರಿತಂತೆ ಎಲ್ಲ ಹಂತದ ಮೇಲ್ವಿಚಾರಣಾ ಅಧಿಕಾರಿಗಳು ಪರಿಶೀಲಿಸಬೇಕು. ಬಿಇಒ, ಸಿಟಿಇ ಕಾಲೇಜಿನ ಪ್ರಾಂಶುಪಾಲರು ಒಟ್ಟಾಗಿ ಸಭೆ ಮಾಡಿ ರೂಪುರೇಷೆ ಸಿದ್ಧಪಡಿಸ ಬೇಕು. ಎಲ್ಲ ಶಾಲೆಗಳಿಗೆ ಭೇಟಿ ನೀಡಿ ನ್ಯೂನತೆಗಳಿದ್ದಲ್ಲಿ, ಸ್ಥಳದಲ್ಲಿ ಮಾರ್ಗ ದರ್ಶನ ನೀಡಬೇಕು. ಈ ‘ಮಿಂಚಿನ ಸಂಚಾರವನ್ನು ಮೇ 30ರವರೆಗೆ ನಡೆಸ ಬೇಕು, ಜೂ.10ರಂದು ಜಿಲ್ಲಾ ಉಪನಿರ್ದೇ ಶಕರು ತಮ್ಮ ವ್ಯಾಪ್ತಿಯ ಆಯುಕ್ತಾಲಯ ಗಳಿಗೆ ವರದಿ ಕಳುಹಿಸಬೇಕೆಂದು ಸಾರ್ವ ಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್. ವಿಶಾಲ್ ಅಧಿಕಾರಿಗಳಿಗೆ ಸೂಚಿದ್ದಾರೆ.
ಮಕ್ಕಳನ್ನು ಕಳುಹಿಸಿ..ಶಾಲೆಗೆ ಸೇರಿಸಿ..
ಮೇ 16ರಂದು ಮಕ್ಕಳನ್ನು ಶಾಲೆಗೆ ಕಳುಹಿಸಿರಿ. ಅಂದಿನಿಂದಲೇ ಬೋಧನೆ ಪ್ರಾರಂಭವಾಗಲಿದೆ. ಹಾಗೂ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸುತ್ತಮುತ್ತ ಮೇ 31ಕ್ಕೆ 5 ವರ್ಷ 5 ತಿಂಗಳು ತುಂಬಿದ ಮಕ್ಕಳಿದ್ದರೆ ಶಾಲೆಗೆ ದಾಖಲು ಮಾಡಬಹುದು. ದಾಖಲಾತಿಯು ದಿನಾಂಕ 16-5 2022 ಸೋಮವಾರ ಪ್ರಾರಂಭಗೊಳ್ಳುತ್ತದೆ.
ದಾಖಲಾತಿಗೆ ಅಗತ್ಯವಾದ ರೆಕಾರ್ಡ್, ಜನನ ಪ್ರಮಾಣ ಪತ್ರ ಮಗುವಿನ ತಂದೆ ತಾಯಿಯ ಆಧಾರ್ ಕಾರ್ಡ್ ಹಾಗೂ ಮಗುವಿನ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಮಾಡಿಸಿದ್ದರೆ ತರಲು ಸೂಚಿಸಲಾಗಿದೆ.
ನಮ್ಮ ಶಾಲೆ.. ನಮ್ಮ ಜವಾಬ್ದಾರಿ.. ಏನ್ ಮಾಡಬಹುದು?
- ಶಾಲಾ ಪ್ರಾರಂಭಕ್ಕೆ ಪೂರ್ವದಲ್ಲಿ ಶಾಲೆಗಳನ್ನು ಸಿದ್ಧಗೊಳಿಸಬೇಕಿದೆ, ಶಾಲೆಗಳನ್ನು ಸ್ವಚ್ಛಗೊಳಿಸಿ ಆಕರ್ಷಣೆಗೊಳಿಸಬೇಕಿದೆ, ನಮ್ಮ 1 ಗಂಟೆ ಸಮಯವನ್ನು ನೀಡಿ, ಶಾಲೆಯಲ್ಲಿ ಶ್ರಮದಾನ ಮಾಡಿ ಶಾಲೆಗಳನ್ನು ಸ್ವಚ್ಛಗೊಳಿಸಿ ತಳಿರು-ತೋರಣಗಳಿಂದ ಸಜ್ಜುಗೊಳಿಸೋಣ.
- ನಿಮ್ಮ ಒಂದು ಗಂಟೆಯ ಸಮಯವನ್ನು ವಿನಿಯೋಗಿಸಿ ಶ್ರಮದಾನ ಮಾಡಿ.
-ಶಾಲೆಯ ಆರಂಭದ ದಿನದಂದು ತಳಿರು-ತೋರಣಗಳಿಂದ ಶಾಲೆಗಳನ್ನು ಅಲಂಕರಿಸಿ ಮಕ್ಕಳನ್ನು ನಗುನಗುತಾ ಸ್ವಾಗತಿಸೋಣ, ಆಟ ವಿನೋದಗಳ ಮೂಲಕ ಅವರನ್ನು ಕಲಿಕೆಗೆ ಕರೆದೊಯ್ಯೋಣ. - ಸರ್ಕಾರಿ ಶಾಲೆಯ ಅಗತ್ಯತೆಗಳನ್ನು ಗಮನಿಸಿ ಅದರ ಅಭಿವೃದ್ಧಿಗಾಗಿ ಯೋಜನೆಯೊಂದನ್ನು ರೂಪಿಸೋಣ.
- ನೀವು ಮತ್ತು ನಿಮ್ಮ ಸ್ನೇಹಿತರು ಸೇರಿ ನಿಮ್ಮೂರಿನ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿ.
- ಶಾಲಾ ವಯಸ್ಸಿನ ಅರ್ಹ ಮಕ್ಕಳು ಶಾಲೆಗೆ ದಾಖಲಾಗದೇ ಇದ್ದಲ್ಲಿ ಅವರನ್ನು ಹತ್ತಿರದ ಸರ್ಕಾರಿ ಶಾಲೆಗೆ ಸೇರಿಸಲು ಅಗತ್ಯ ಕ್ರಮ ವಹಿಸೋಣ.
- ನಾವು ಓದಿದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಅದರ ಅಭಿವೃದ್ಧಿಗೆ ಕೈಜೋಡಿಸೋಣ.
- ಶಿಕ್ಷಕರು ಹಾಗೂ ಮಕ್ಕಳಿಗೆ ಉಪಯುಕ್ತವಾಗುವ ಪುಸ್ತಕಗಳು ನಿಮ್ಮಲ್ಲಿ ಇದ್ದು ಅವುಗಳನ್ನು ವಿಲೇವಾರಿ ಮಾಡಬೇಕೆಂದುನೀವು ಬಯಸಿದ್ದರೆ, ಅಂತಹ ಪುಸ್ತಕಗಳನ್ನು ನಿಮ್ಮ ಹತ್ತಿರದ ಸರ್ಕಾರಿ ಶಾಲೆಗೆ ನೀಡುವ ಮೂಲಕ ಶಾಲಾ ಗ್ರಂಥಾಲಯವನ್ನು ಉತ್ತಮಪಡಿಸಲು ನೆರವಾಗೊಣ.
- ವಾರ ಅಥವಾ ಹದಿನೈದು ದಿನಕ್ಕೊಮ್ಮೆ ಹತ್ತಿರದ ಸರ್ಕಾರಿ ಶಾಲೆಗೆ ಭೇಟಿ ನೀಡಿ ನಮ್ಮ ತಜ್ಞತೆಯ ಕ್ಷೇತ್ರ ಅಥವಾ ವಿಷಯದ ಬಗ್ಗೆ ಮಕ್ಕಳಿಗೆ ಬೋಧನೆ ಮಾಡೋಣ.
- ನಮ್ಮ ವೃತ್ತಿಯ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವ ಮೂಲಕ ಅವರಲ್ಲಿ ಕನಸು / ಗುರಿಗಳನ್ನು ತುಂಬೋಣ.
- ಸರ್ಕಾರಿ ಶಾಲೆಗಳ ಸಬಲೀಕರಣ ದಲ್ಲಿ ನಾವೆಲ್ಲರೂ ಭಾಗಿಯಾಗೋಣ.