ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನರಾರಂಭ.!
– ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, 2 ಜೊತೆ ಸಮವಸ್ತ್ರ ವಿತರಣೆ
– 1ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯ ಈ ಬಾರಿ ఇల్ల
NAMMUR EXPRESS NEWS
ಬೆಂಗಳೂರು: ರಾಜ್ಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29ರ ಇಂದಿನಿಂದ ಪುನರಾರಂಭವಾಗುತ್ತಿದ್ದು, 31 ರಂದು ರಾಜ್ಯದ ಎಲ್ಲ ಶಾಲೆಗಳಲ್ಲೂ ಏಕಕಾಲಕ್ಕೆ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ. 2024-25ನೇ ಸಾಲಿನ ಶಿಕ್ಷಣವನ್ನು ‘ಶೈಕ್ಷಣಿಕ ಬಲವರ್ಧನೆ’ ಪರಿಕಲ್ಪನೆಯ ಆಧಾರದಲ್ಲಿ ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷವಾಕ್ಯ ಸಿದ್ಧಪಡಿಸಿದ್ದು, ಕಲಿಕಾ ಗುಣಮಟ್ಟ ಹಾಗೂ ತಂತ್ರಜ್ಞಾನ ಆಧಾರಿತ ಬೋಧನೆಗೆ ಹೆಚ್ಚಿನ ಒತ್ತು ನೀಡಲು ಸೂಚಿಸಿದೆ.
ಶಾಲಾ ಮಕ್ಕಳಿಗೆ ಮೊದಲ ದಿನವೇ ಪಠ್ಯಪುಸ್ತಕ, 2 ಜೊತೆ ಸಮವಸ್ತ್ರ:
ಶಾಲಾ ಮಕ್ಕಳಿಗೆ ಮೊದಲ ದಿನದಿಂದಲೇ ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. ಇದೇ ಮೊದಲ ಬಾರಿ ಶಾಲಾ ಆರಂಭಕ್ಕೂ ಮೊದಲೇ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಶಾಲೆಗಳನ್ನು ತಲುಪಿವೆ. ಒಂದೇ ಬಾರಿಗೆ ಎರಡೂ ಜೊತೆ ಸಮವಸ್ತ್ರ ನೀಡಲಾಗುತ್ತಿದೆ.
1ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯ ಈ ಬಾರಿ ఇల్ల:
ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮ ರೂಪಿಸಲಾಗಿದೆ. ಆದರೆ, ಈ ನಿಯಮ 2024-25ನೇ ಶೈಕ್ಷಣಿಕ ಸಾಲಿಗೆ ಅನ್ವಯಿಸುವುದಿಲ್ಲ. ಮುಂದಿನ ವರ್ಷದಿಂದ ಶಾಲೆಗೆ ಸೇರಿಸುವ ಮಕ್ಕಳಿಗೆ ಈ ನಿಯಮ ಕಡ್ಡಾಯ. ಶಾಲೆಗೆ ಮಕ್ಕಳನ್ನು ಸೇರಿಸುವಾಗ ಜನನ ಪ್ರಮಾಣಪತ್ರ, ಆಸ್ಪತ್ರೆ ದಾಖಲೆ, ಅಂಗನವಾಡಿ, ಆರೋಗ್ಯ ಸಹಾಯಕಿಯರ ದೃಢೀಕರಣ, ಇಲ್ಲವೇ ಪೋಷಕರು ನೀಡುವ ಸ್ವಯಂ ದೃಢೀಕರಿಸಿದ ಪ್ರಮಾಣ ಪತ್ರ ಸೇರಿದಂತೆ ಯಾವುದಾದರೂ ಒಂದು ದಾಖಲೆ ಸಲ್ಲಿಸಬೇಕು.