- ಸರ್ಕಾರದ ನಿರ್ಧಾರ: ಪರೀಕ್ಷೆ ನಡೆಯುತ್ತಂತೆ…
ಬೆಂಗಳೂರು: ಆರೋಗ್ಯ ಇಲಾಖೆ ಮತ್ತು ತಾಂತ್ರಿಕ ಸಲಹಾ ಸಮಿತಿ ವರದಿ ಆಧರಿಸಿ ಸರ್ಕಾರ ಡಿಸೆಂಬರ್ ಅಂತ್ಯದವರೆಗೆ ಶಾಲಾ ಕಾಲೇಜುಗಳನ್ನು ಆರಂಭಿಸುವುದಿಲ್ಲ ಎಂದು ಹೇಳಿದೆ. ಈ ಮೂಲಕ ಶಾಲಾ ಕಾಲೇಜುಗಳು ಈ ವರ್ಷಕ್ಕೆ ತೆರೆಯಲ್ಲ. ಆದರೆ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಸಭೆವರೆಗೂ ಈ ನಿರ್ಧಾರ ಅನ್ವಯ ಆಗಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಚಳಿಗಾಲದ ಹಿನ್ನಲೆಯಲ್ಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ನವೆಂಬರ್ ಅಂತ್ಯ ಹಾಗೂ ಡಿಸೆಂಬರ್ ತಿಂಗಳಲ್ಲಿ ಕೋವಿಡ್ 19 ಎರಡನೆ ಅಲೆ ಕಂಡುಬರುb ಸಾಧ್ಯತೆ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸದೆ ಹಾಲಿ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಲಾಗಿದೆ. ಡಿಸೆಂಬರ್ ಮೂರನೆ ವಾರ ಮತ್ತೊಮ್ಮೆ ಸಭೆ ಸೇರಿ ತಾಂತ್ರಿಕ ಸಲಹಾ ಸಮಿತಿ ಹಾಗೂ ಆರೋಗ್ಯ ಇಲಾಖೆಗಳ ಅಭಿಪ್ರಾಯಗಳನ್ನು ಪಡೆದು ಶಾಲೆ ಆರಂಭಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಈಗಾಗಲೇ ಅಂತಿಮ ವರ್ಷದ ಪದವಿ ಕಾಲೇಜುಗಳು ಆರಂಭವಾಗಿವೆ. ಮುಂದಿನ ಸಭೆಯಲ್ಲಿ ಕೇಳಿ ಬರುವ ಸಲಹೆ, ಸೂಚನೆ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಡಿಸೆಂಬರ್ನಲ್ಲಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಪುನರಾರಂಭಿಸುವುದು ಸೂಕ್ತವಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸಲಹೆ ನೀಡಿದ್ದಾರೆ. ಶಾಲೆ ಪುನರಾರಂಭಕ್ಕೆ ಸಂಬಂಧಿಸಿದಂತೆ, ಡಿಸೆಂಬರ್ 3ನೇ ವಾರದಲ್ಲಿ ಸಭೆ ನಡೆಸಿ,ಅವಲೋಕನ ಮಾಡಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.