ಸಿಇಟಿ ಮರು ಪರೀಕ್ಷೆ ನಡೆಸಲ್ಲ ಎಂದ ಸರ್ಕಾರ
– 50 ಔಟ್ ಆಫ್ ಸಿಲೆಬಸ್ ಪ್ರಶ್ನೆಗಳ ಕೈಬಿಟ್ಟು ಮೌಲ್ಯಮಾಪನಕ್ಕೆ ಆದೇಶ: ರಾಜ್ಯ ಸರಕಾರ ಸ್ಪಷ್ಟನೆ
– ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ-2 ಪರೀಕ್ಷೆ
NAMMUR EXPRESS NEWS
ಬೆಂಗಳೂರು: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಇಟಿ ಮರುಪರೀಕ್ಷೆಯನ್ನು ನಡೆಸುವುದಿಲ್ಲ. ಪರೀಕ್ಷೆಯಲ್ಲಿ ಕೇಳಲಾದ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳನ್ನು ಹೊರತುಪಡಿಸಿ, ಉಳಿದ ಪ್ರಶ್ನೆಗಳನ್ನು ಪರಿಗಣಿಸಿ ವಿದ್ಯಾರ್ಥಿಗಳಿಗೆ ಅಂಕ ನೀಡಲಾಗುತ್ತದೆ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ. ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಬರೋಬ್ಬರಿ 50 ಪಠ್ಯತರ ಪ್ರಶ್ನೆಗಳನ್ನು ಕೇಳಿರುವುದು ತಜ್ಞರ ಸಮಿತಿ ವರದಿಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಠೇತರ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳನ್ನು ಮಾತ್ರ ಮೌಲ್ಯ ಮಾಪನಕ್ಕೆ ಪರಿಗಣಿಸಿ ಅದರ ಫಲಿತಾಂಶ ಆಧರಿಸಿ ಅಂಕ ನೀಡಬೇಕು ಎಂದು ತಿಳಿಸಿದೆ.
ಪಠ್ಯೇತರ ಪ್ರಶ್ನೆಗಳ ಖಚಿತತೆಗೆ ವಿಷಯವಾರು ರಚಿಸಿದ್ದ ತಜ್ಞರ ಸಮಿತಿಯು ಭೌತಶಾಸ್ತ್ರ-9, ರಸಾಯನ ಶಾಸ್ತ್ರ- 15, ಗಣಿತ-15 ಮತ್ತು ಜೀವಶಾಸ್ತ್ರ ವಿಷಯದಲ್ಲಿ 11 ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿಸಿದೆ. ಈ ಪ್ರಶ್ನೆಗಳನ್ನು ಮೌಲ್ಯ ಮಾಪನದಿಂದ ಕೈ ಬಿಡಲಾಗುತ್ತದೆ. ಇದರ ಜೊತೆಗೆ 2 ತಪ್ಪು ಪ್ರಶ್ನೆಗಳಿದ್ದು ಅವುಗಳಿಗೆ ಕೃಪಾಂಕ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.
ಭೌತಶಾಸ್ತ್ರದಲ್ಲಿ 9, ರಸಾಯನಶಾಸ್ತ್ರದಲ್ಲಿ 15, ಗಣಿತದಲ್ಲಿ 15, ಜೀವಶಾಸ್ತ್ರದಲ್ಲಿ 11 ಪ್ರಶ್ನೆಗಳನ್ನು ಪಠ್ಯಕ್ರಮದ ಹೊರತಾಗಿ ಪರೀಕ್ಷೆಯಲ್ಲಿ ಕೇಳಲಾಗಿತ್ತು. ಹೀಗಾಗಿ ಈ ಪ್ರಶ್ನೆಗಳನ್ನು ಪರಿಗಣಿಸುತ್ತಿಲ್ಲ. ಆದರೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎರಡು ತಪ್ಪಾದ ಪ್ರಶ್ನೆಗಳಿಗೆ ಮಾತ್ರ ಅಂಕಗಳನ್ನು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ-2 ಪರೀಕ್ಷೆ
2023 -24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ -2 ಎಪ್ರಿಲ್ 29 ರಿಂದ ರಾಜ್ಯದಾತ್ಯಂತ ಆರಂಭವಾಗಿದೆ.84,933 ಬಾಲಕರು, 64,367 ಬಾಲಕಿಯರು ಸೇರಿ ಒಟ್ಟು 1,49,300 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ ಮೂರು ಬಾರಿ ಪರೀಕ್ಷೆ ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೆಯೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.
ಈಗಾಗಲೇ ಪರೀಕ್ಷೆ ಒಂದು ಬರೆದು ಪಾಸಾಗಿದ್ದರೂ ಕೂಡ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಅವಕಾಶ ಇದೆ. ಪರೀಕ್ಷೆ 2ರ ಫಲಿತಾಂಶ ಸಮಾಧಾನ ತರದಿದ್ದಲ್ಲಿ ಮೇನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ 3 ಬರೆಯಬಹುದಾಗಿದೆ. ಮೇ 14 ರವರೆಗೆ ಬೆಂಗಳೂರಿನ 39 ಸೇರಿ ರಾಜ್ಯದಾತ್ಯಂತ 301 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ 1ರಲ್ಲಿ ಅನುತ್ತೀರ್ಣರಾಗಿದ್ದ 89,221 ವಿದ್ಯಾರ್ಥಿಗಳು, ಹಿಂದಿನ ಪರೀಕ್ಷೆಯ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು 32,848 ವಿದ್ಯಾರ್ಥಿಗಳು, 27,092 ಪುನರಾವರ್ತಿತ ವಿದ್ಯಾರ್ಥಿಗಳು, ಪರೀಕ್ಷೆ 1ರ ವೇಳೆ ಶೇಕಡ 75 ರಷ್ಟು ಹಾಜರಾತಿ ಇಲ್ಲದೆ ಪರೀಕ್ಷೆಯಿಂದ ವಂಚಿತರಾಗಿದ್ದ 139 ಮಂದಿ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.