ಶೈಕ್ಷಣಿಕ ವರ್ಷ ಏನೇನ್ ಇರುತ್ತೆ?: ಮಾರ್ಗದರ್ಶಿ ಪ್ರಕಟ
– ಶಾಲೆಗಳಿಗೆ ಅ.3ರಿಂದ ದಸರಾ ರಜೆ : ಏ.11ರಿಂದ ಬೇಸಿಗೆ ರಜೆ
– ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆ: ಹಂತ ಹಂತವಾಗಿ ನೇಮಕ
NAMMUR EXPRESS NEWS
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆ, ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಅದರಂತೆ ಅಕ್ಟೋಬರ್.3, 2024ರಿಂದ ದಸರಾ ರಜೆ ಹಾಗೂ ಎ. 11, 2025 ರಿಂದ ಬೇಸಿಗೆ ರಜೆ ಆರಂಭಗೊಳ್ಳಲಿದೆ. ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಕಟಿಸಿರುವಂತ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುವುದರಿಂದ ರಾಜ್ಯಾಧ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆ, ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದಿದೆ.
ಸದರಿ ಮಾರ್ಗಸೂಚಿಯಲ್ಲಿ ವಾರ್ಷಿಕ, ಮಾಹೆವಾರು ಪಾಠ ಹಂಚಿಕೆ, ಪತ್ಯೇತರ ಚಟುವಟಿಕೆಗಳು, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳು, ಸಂಭ್ರಮ ಶನಿವಾರ ಆಯೋಜನೆಗೆ ಪೂರಕವಾದ ಪಠ್ಯಾಧಾರಿತ ಚಟುವಟಿಕೆ ಬ್ಯಾಂಕ್ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ ಸಿಸಿಇ ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯವಾಗುವಂತೆ ಯೋಜಿಸಿ, ಸಿದ್ಧಪಡಿಸಲಾಗಿದೆ ಎಂದಿದೆ. 2024-25ನೇ ಸಾಲಿನಲ್ಲಿ ಮೊದಲನೇ ಅವಧಿಗೆ ದಿನಾಂಕ 29-05-2024 ರಿಂದ ಆರಂಭಗೊಳ್ಳಲಿವೆ. ದಿನಾಂಕ 2-10-2024ರವರೆಗೆ ನಡೆಯಲಿದೆ. ಎರಡನೇ ಅವಧಿಗೆ ದಿನಾಂಕ 21-10-2024ರಿಂದ 10-04-2025 ರ ವರೆಗೆ ಶಾಲಾ ಕರ್ತವ್ಯದ ದಿನಗಳಾಗಿದ್ದಾವೆ ಎಂದಿದೆ.
ಹೀಗಿದೆ 2024-25ನೇ ಸಾಲಿನ ರಜಾ ದಿನಗಳು:
ದಿನಾಂಕ 03-10-2024ರಿಂದ ದಿನಾಂಕ 20-10-2024ರವರೆಗೆ ದಸರಾ ರಜೆಯನ್ನು ಘೋಷಿಸಲಾಗಿದೆ. ದಿನಾಂಕ 11-04-2024 ರಿಂದ ದಿನಾಂಕ 28-05-2025ರವರೆಗೆ ಬೇಸಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಇನ್ನೂ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಾಗುವಂತ ಒಟ್ಟು ಶಾಲಾ ಕರ್ತವ್ಯದ ದಿನಗಳು 224 ಆಗಿವೆ. ಪರೀಕ್ಷೆಗಳು ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನ, ಪತ್ಯೇತರ ಚಟುವಟಿಕೆಗಳು, ಪಠ್ಯ ಚಟುವಟಿಕೆಗಳು, ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 24 ದಿನ ಮೀಸಲಿಡಲಾಗಿದೆ. ಮೌಲ್ಯಮಾಪನಾ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನ, ಶಾಲಾ ಸ್ಥಳೀಯ ರಜೆಗಳಿಗೆ 04 ದಿನಗಳು ಹಾಗೂ ಬೋಧನಾ ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯದ ದಿನಗಳು 180 ದಿನಗಳು ಅಂತ ತಿಳಿಸಿದೆ.
ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆ.!
53 ಸಾವಿರ ಶಿಕ್ಷಕರ ಕೊರತೆ ಇದೆ. 12 ಸಾವಿರ ಶಿಕ್ಷಕರನ್ನು ಈಗ ನೇಮಕ ಮಾಡಲಾಗಿದ್ದು ಹಂತಹಂತವಾಗಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು ಶಿಕ್ಷಣ ಇಲಾಖೆಯಲ್ಲಿ ಹಲವು ಸಮಸ್ಯೆ ಗಳಿವೆ. ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆ ಇದೆ. 12 ಸಾವಿರ ಶಿಕ್ಷಕರನ್ನು ಈಗ ನೇಮಕ ಮಾಡಲಾಗಿದೆ. ಅನುದಾನಿತ ಶಾಲೆಗಳ 6 ಸಾವಿರ ಶಿಕ್ಷಕರ ನೇಮಕಾತಿಗೆ ಸೂಚನೆ ನೀಡಲಾಗಿದೆ ಹಂತ ಹಂತವಾಗಿ ಎಲ್ಲಾ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದ ರೀತಿ ಕ್ರಮ:
ಎಸ್ಎಸ್ಎಲ್ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಎರಡು ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ ನಿರ್ಧಾರದಿಂದ ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶ ಬಂದಿದೆ. 42 ಸಾವಿರ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಎಸ್ಎಸ್ಎಲ್ಸಿಯಲ್ಲಿ ಫೇಲಾದ ವಿದ್ಯಾರ್ಥಿಗಳು ಶಾಲೆಯಿಂದ ಹಿಂದೆ ಉಳಿಯುತ್ತಿದ್ದರು. ನಮ್ಮ ಈ ನಿರ್ಧಾರದಿಂದ ಮಕ್ಕಳು ಮತ್ತೆ ಪರೀಕ್ಷೆ ಬರೆಯಲು ಮುಂದಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿ ಶಾಲಾ ಕಾಲೇಜು ಆರಂಭ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದ ರೀತಿ ಕ್ರಮ ಕೈಗೊಳ್ಳುತ್ತೇವೆ. ಶಾಲಾ ಮಕ್ಕಳ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಈಗಾಗಲೇ 95% ರಷ್ಟು ಪಠ್ಯ ಪುಸ್ತಕ ಸಮವಸ್ತ್ರ ವಿತರಣೆ ಮಾಡಲಾಗಿದೆ. ಈ ತಿಂಗಳ ಒಳಗೆ 100% ವಿತರಣೆ ಮಾಡುತ್ತೇವೆ ಎಂದರು.