ಮಕ್ಕಳ ಗೋಳು ಕೇಳೋರು ಯಾರು?
– ಸರ್ಕಾರ, ಶಾಲೆಗಳ ಜಟಾಪಟಿಯಲ್ಲಿ ಕೂಸು ಬಡವಾಯ್ತು
– ಪಬ್ಲಿಕ್ ಪರೀಕ್ಷೆ ಬಗ್ಗೆ ಹೈಕೋರ್ಟ್ ಇಂದು ಮಹತ್ವದ ತೀರ್ಪು
NAMMUR EXPRESS NEWS
ಬೆಂಗಳೂರು: ಅನಿಶ್ಚಿತ ಪರೀಕ್ಷೆ ಮಕ್ಕಳಿಗೇಕೆ ಶಿಕ್ಷೆ.. ಪಾಲಕರು, ವಿದ್ಯಾರ್ಥಿಗಳಿಗೆ ನಿದ್ರೆಯಿಲ್ಲ, ಸರ್ಕಾರ, ಶಿಕ್ಷಣ ಸಂಸ್ಥೆಗಳ ಪ್ರತಿಷ್ಠೆಗೆ ಕೂಸು ಬಡವಾಯ್ತು…! ಹೌದು. ರಜೆಯಿದ್ದರೂ ಆಟ ಆಡುವುದಕ್ಕೆ ಮನಸ್ಸಿಲ್ಲ. ಅಪ್ಪ ಅಮ್ಮನ ಜತೆ ಕಾಲ ಕಳೆಯೋಣ ಎಂದರೆ ಪರೀಕ್ಷೆಯ ಭಯ ಬಿಡುತ್ತಿಲ್ಲ. ರಾಜ್ಯ ಪಠ್ಯಕ್ರಮದ 5,8 ಮತ್ತು 9ನೇ ತರಗತಿ ಮಕ್ಕಳ ತುಮುಲವಿದು. ಇದೀಗ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ. ಮೌಲ್ಯಾಂಕನ ಪರೀಕ್ಷೆ ಕುರಿತು ಹೈಕೋರ್ಟ್ ತೀರ್ಪು ಕಾಯ್ದಿರಿಸಿರುವುದರಿಂದ ಮಕ್ಕಳು ಮುಂದೇನು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಬೋರ್ಡ್ ಪರೀಕ್ಷೆ ಮುಂದುವರಿಯುತ್ತಾ? ಅಥವಾ ರದ್ದಾಗುತ್ತಾ? ರದ್ದಾದರೆ ಮುಂದೇನು ಎಂಬ ತೊಳಲಾಟಕ್ಕೆ ವಿದ್ಯಾರ್ಥಿಗಳ ಜತೆಗೆ ಪಾಲಕರೂ ಸಿಲುಕಿದ್ದಾರೆ. ಅಲ್ಲದೆ ಸರ್ಕಾರದ ವಿರುದ್ಧ ಆಕ್ರೋಶ ಕೂಡ ವ್ಯಕ್ತಪಡಿಸುತ್ತಿದ್ದಾರೆ.
ಪರೀಕ್ಷೆ ಮುಗಿದ ಮೇಲೆ ಬೇರೆ ಬೇರೆ ಚಟುವಟಿಕೆಗಳಿಗೆ ಮಕ್ಕಳನ್ನು ತೊಡಗಿಸುವ ಕುರಿತು ಪಾಲಕರು ಯೋಜನೆ ರೂಪಿಸಿಕೊಂಡಿದ್ದರು. ಆದರೆ ಬೋರ್ಡ್ ಪರೀಕ್ಷೆಯ ಭವಿಷ್ಯದ ಕುರಿತು ಶಾಲೆಗಳಿಂದಾಗಲಿ, ಸರ್ಕಾರದಿಂದಾಗಲಿ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಮೌಲ್ಯಾಂಕನ ಪರೀಕ್ಷೆ ಮುಂದುವರಿಯದೇ ಹೋದಲ್ಲಿ ಶಾಲಾ ಹಂತದ ಪರೀಕ್ಷೆ ಮಾಡುತ್ತಾರಾ? ಮಾಡಿದರೆ ಯಾವಾಗ? ಮಕ್ಕಳನ್ನು ಹೇಗೆ ಅಣಿಗೊಳಿಸ ಬೇಕೆಂಬ ಪ್ರಶ್ನೆ ಪಾಲಕರನ್ನು ಕಾಡಲಾರಂಭಿಸಿದೆ. ಇದರ ಜತೆಗೆ ಪಬ್ಲಿಕ್ ಪರೀಕ್ಷೆ ಎಂಬ ಭಯ ಮಕ್ಕಳ ಮನಸ್ಸಿನಲ್ಲಿ ಕುಳಿತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಬೇಕಾದ ಅಗತ್ಯವಿದೆ ಎಂಬ ಸಲಹೆ ಶಿಕ್ಷಣ ತಜ್ಞರ ವಲಯದಲ್ಲಿ ಕೇಳಿಬರುತ್ತಿದೆ.
ಪರೀಕ್ಷೆ ಭಯ ಬೇಡ ಎಂದು ಧೈರ್ಯ ತುಂಬುವ ಕೆಲಸ ಶಿಕ್ಷಣ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳಿಂದ ಆಗಬೇಕಿತ್ತು. ಸೂಕ್ತ ಮಾರ್ಗಸೂಚಿ ಹೊರಡಿಸಿ, ಅಗತ್ಯವಿರುವ ಮಕ್ಕಳಿಗೆ ಆಪ್ತ ಸಮಾಲೋಚನೆ ಕೊಡಿಸಿ, ನ್ಯಾಯಾಲಯದ ತೀರ್ಪು ಬರುವವರೆಗೂ ಮಕ್ಕಳನ್ನು ರಕ್ಷಿಸುವ ಹೊಣೆಯನ್ನು ಶಿಕ್ಷಣ ಇಲಾಖೆ ಹಾಗೂ ಶಾಲೆಗಳು ನಿಭಾಯಿಸಬೇಕಿತ್ತು. ಆದರೆ ಈ ಕೆಲಸಗಳು ಆಗಿಲ್ಲ. ಪರಿಸ್ಥಿತಿಯ ತೀವ್ರತೆ ಅರಿತು ಮಕ್ಕಳ ಹಿತದೃಷ್ಟಿಯಿಂದ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಶಿಕ್ಷಣ ತಜ್ಞರು ಒತ್ತಾಯಿಸಿದ್ದಾರೆ.
ಏನಿದು ಗೊಂದಲ?
ರಾಜ್ಯದ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಎಕ್ಸಾಂ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿತ್ತು. ಮಾ. 11ರಿಂದ 2 ಪರೀಕ್ಷೆ ನಡೆದ ಬಳಿಕ ಸುಪ್ರೀಂಕೋರ್ಟ್ ಪರೀಕ್ಷೆಗೆ ತಡೆ ನೀಡಿದೆ. ಇನ್ನು ಇದೇ ಪ್ರಕರಣ ಸಂಬಂಧ ವಾದ- ಪ್ರತಿವಾದ ಆಲಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದ್ದು, ಶೀಘ್ರವೇ ಪ್ರಕಟಿಸಲಿದೆ. ಇದೇಕೆ ಎರಡೆರಡು ಪರೀಕ್ಷೆ ಶಿಕ್ಷೆ?: ಹೈಕೋರ್ಟ್ ಏಕಸದಸ್ಯ ಪೀಠ ಮೌಲ್ಯಾಂಕನ ಪರೀಕ್ಷೆ ರದ್ದುಗೊಳಿಸಿದ ನಂತರ ಕೆಲವು ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಶಾಲಾ ಹಂತದಲ್ಲೇ ಪರೀಕ್ಷೆ ಮುಗಿಸಿವೆ. ಅದರಲ್ಲಿಯೂ ಪ್ರಾಥಮಿಕ ಮತ್ತು ಪ್ರೌಢಶಾಲೆ ಒಟ್ಟಿಗೆ ಇರುವ ಖಾಸಗಿ ಶಾಲೆಗಳು 5,8 ಮತ್ತು 9ನೇ ತರಗತಿಗೆ ಶಾಲಾ ಹಂತದಲ್ಲಿಯೇ ಪರೀಕ್ಷೆ ಮಾಡಿ ಕೈತೊಳೆದುಕೊಂಡಿವೆ.
ಮಾ. 25ರಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ಆರಂಭವಾಗಲಿದೆ. ಲೋಕಸಭಾ ಚುನಾವಣೆ ಇರುವ ಕಾರಣ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡುವ ಸಾಧ್ಯತೆಗಳಿರುತ್ತವೆ. ಒಂದು ವೇಳೆ ನ್ಯಾಯಾಲಯವು ಶಾಲಾ ಹಂತದಲ್ಲಿಯೇ ಪರೀಕ್ಷೆ ನಡೆಸಿ ಎಂದು ಆದೇಶ ಹೊರಡಿಸಿದರೆ ಅನುಕೂಲವಾಗಲಿದೆ ಎಂಬ ಕಾರಣ ನೀಡಿ ಕೆಲವು ಖಾಸಗಿ ಶಾಲೆಗಳಲ್ಲಿ ಪರೀಕ್ಷೆ ಮುಗಿಸಲಾಗಿದೆ. ಇಂತಹ ಸಮಯದಲ್ಲಿ ನ್ಯಾಯಾಲಯ ಮೌಲ್ಯಾಂಕನ ಪರೀಕ್ಷೆ ನಡೆಸಿ ಎಂದು ತೀರ್ಪು ನೀಡಿದರೆ, ವಿದ್ಯಾರ್ಥಿಗಳು ಮತ್ತೆ ಮೌಲ್ಯಾಂಕನವನ್ನು ಎದುರಿಸಬೇಕಾಗುತ್ತದೆ. ಆಗ ನಿರಂತರವಾಗಿ ಎರಡೆರಡು ಪರೀಕ್ಷೆ ಬರೆಯುವ ಒತ್ತಡ ಮಕ್ಕಳ ಮೇಲೆ ಬೀಳಲಿದೆ.
5, 8 ಮತ್ತು 9ನೇ ತರಗತಿ ಪರೀಕ್ಷೆಯ ಗೊಂದಲದಿಂದ ಮಕ್ಕಳ ಮನಸ್ಸಿನಲ್ಲಿ ಆಗುತ್ತಿರುವ ಕಳವಳ ಮತ್ತು ಆತಂಕ ನಿವಾರಣೆ ಮಾಡಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿರುವುದು ಬೇಸರದ ಸಂಗತಿ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ನ ನಿರ್ದೇಶಕ ನಾಗಸಿಂಹರಾವ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಖಾಸಗಿ ಶಾಲೆಗಳ ಒಕ್ಕೂಟ
– ಬೋರ್ಡ್ ಎಕ್ಸಾಂ ಗೊಂದಲಕ್ಕೆ ಮುಖ್ಯ ಕಾರಣ ಖಾಸಗಿ ಶಾಲೆಗಳ ಒಕ್ಕೂಟ
– ಪರೀಕ್ಷೆ ಘೋಷಣೆಯಾದ ಸಂದರ್ಭದಲ್ಲಿ ಮೌನಕ್ಕೆ ಶರಣಾಗಿದ್ದ ರುಪ್ಪಾ
– ಪರೀಕ್ಷೆ ಸಮೀಪಿಸುತ್ತಿದ್ದಂತೆ ಕೋರ್ಟ್ ಮೆಟ್ಟಿಲೇರಿದ್ದ ಖಾಸಗಿ ಶಾಲೆ ಒಕ್ಕೂಟ
– ಮಕ್ಕಳು, ಪಾಲಕರಿಗೆ ತೊಂದರೆ ಮಾಡುವುದೇ ರುಪ್ಪಾ ಉದ್ದೇಶವಾಗಿತ್ತಾ?
– ಬೋರ್ಡ್ ಎಕ್ಸಾಂಗೆ ಮಹತ್ವವಿಲ್ಲ ಎಂದು ಕೋರ್ಟಲ್ಲಿ ಶಿಕ್ಷಣ ಇಲಾಖೆ ವಾದ
– ಮಹತ್ವ ಇಲ್ಲದಿದ್ದರೆ ಪರೀಕ್ಷೆ ಔಚಿತ್ಯವೇನಿತ್ತೆಂಬ ಪ್ರಶ್ನೆಗೆ ಮೌನ ತಾಳಿದ ರಾಜ್ಯ ಸರ್ಕಾರ
– ಸರ್ಕಾರ, ರುಪ್ಪಾ ತಪ್ಪಿನಿಂದಾಗಿ ವಿದ್ಯಾರ್ಥಿಗಳಿಗೆ ಮಾನಸಿಕ ಯಾತನ
ಮಕ್ಕಳ ತೊಳಲಾಟ ಏನು?
– ಶಾಲಾ ಹಂತದ ಪರೀಕ್ಷೆ ಮುಗಿದರೂ ಸಂಭ್ರಮಿಸಲಾಗುತ್ತಿಲ್ಲ
– ಆಟ, ಪ್ರವಾಸ ಜತೆಗೆ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಭಯ
– ಮೌಲ್ಯಾಂಕನ ಪರೀಕ್ಷೆ ಮತ್ತೆ ನಡೆದರೆ ಕತೆ ಏನೆಂಬ ಆತಂಕ
– ಗೊಂದಲದಿಂದ ಮಾನಸಿಕ ತೊಳಲಾಟದಲ್ಲಿ ವಿದ್ಯಾರ್ಥಿಗಳು
– ಮಕ್ಕಳಿಗೆ ಧೈರ್ಯ ಹೇಳಲು ಮುಂದಾಗದ ಶಿಕ್ಷಣ ಇಲಾಖೆ
– ಪರೀಕ್ಷೆ ಟೆನ್ಯನ್ನಲ್ಲಿ ಮನೆಯಲ್ಲೇ ಮಂಕಾಗುತ್ತಿರುವ ಮಕ್ಕಳು
– ಮಕ್ಕಳ ಜತೆ ಪ್ರವಾಸಕ್ಕೆ ಅಣಿಯಾಗಿದ್ದ ಪಾಲಕರಿಗೂ ಬೇಸರ
ಶಿಕ್ಷಣ ತಜ್ಞರ ಆತಂಕವೇನು?
– ಮಕ್ಕಳ ಶಿಕ್ಷಣ ಹಕ್ಕು, ಜೀವಿಸುವ ಹಕ್ಕು ಗೊಂದಲಕ್ಕೆ ಸಿಲುಕಿದೆ
– ಬೋರ್ಡ್ ಪರೀಕ್ಷೆಗೆ ತಡೆ ಬಿದ್ದ ಬಳಿಕ ಮಕ್ಕಳಲ್ಲಿ ಗೊಂದಲ
– ಬಹುತೇಕ ಕಡೆ ವಿದ್ಯಾರ್ಥಿಗಳು ಪರೀಕ್ಷೆ ತಯಾರಿ ನಿಲ್ಲಿಸಿದ್ದಾರೆ
– ಮಕ್ಕಳಿಗೆ ಉತ್ಸಾಹ ತುಂಬಲು ಸರ್ಕಾರ ಕ್ರಮ ಕೈಗೊಂಡಿಲ್ಲ