ಹಾಸನ ಅಕ್ಷರ ಬುಕ್ಹೌಸ್ಗೆ ದಶಕದ ಸಂಭ್ರಮ!
– ಓದುಗ ವಲಯದ ಮೆಚ್ಚುಗೆ ಪಡೆದ ಪುಸ್ತಕ ಮಳಿಗೆ
– ಟೈಮ್ಸ್ ಗಂಗಾಧರ್, ಶಿವಕುಮಾರ್ ಸಾಹಸಕ್ಕೆ ಅಭಿನಂದನೆ
NAMMUR EXPRESS NEWS
ಹಾಸನ: ಸಾವಿರ ಉದ್ಯಮಗಳನ್ನು ಹುಟ್ಟು ಹಾಕುವುದು ಕಷ್ಟದ ಕೆಲಸವಲ್ಲ, ಆದರೆ ಪುಸ್ತಕ ಸಂಸ್ಕೃತಿ ಹುಟ್ಟು ಹಾಕುವುದು ಬಹಳ ಕಷ್ಟದ ಕೆಲಸ. ಆದರೂ ಓದುವ ಸಂಸ್ಕೃತಿ ಹುಟ್ಟು ಹಾಕಿದ ಅಕ್ಷರ ಬುಕ್ ಹೌಸ್ ಮಾಲೀಕರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ಸುವರ್ಣ ಕರ್ನಾಟಕ ಸಂಭ್ರಮ ಪ್ರಶಸ್ತಿ ಪುರಸ್ಕೃತರು, ಹಿರಿಯ ಸಾಹಿತಿ ಬಾನು ಮುಸ್ತಾಕ್ ತಿಳಿಸಿದ್ದಾರೆ. ಹಾಸನದಲ್ಲಿ ನಡೆದ ಅಕ್ಷರಬುಕ್ ಹೌಸ್ನ ದಶಕದ ಸಂಭ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾಹಿತ್ಯ ಲೋಕಕ್ಕೆ ಮುಕುಟ ಮಣಿ ಕೊಟ್ಟ ಹಾಸನ ಜಿಲ್ಲೆಯಲ್ಲಿ ಸಾಹಿತ್ಯ, ಸಂಸ್ಕೃತಿಯನ್ನು ಪಸರಿಸುವ ನಿಟ್ಟಿನಲ್ಲಿ ಒಂದು ಉತ್ತಮ ಪುಸ್ತಕ ಮಳಿಗೆ ಇಲ್ಲವೆಂಬ ಕೊರಗು ಎಲ್ಲರನ್ನೂ ಕಾಡುತಿತ್ತು. ಸಾಹಿತ್ಯ ಪ್ರಿಯರ ಕೊರಗನ್ನು ನಿವಾರಿಸುವ ನಿಟ್ಟಿನಲ್ಲಿ ದಶಕದ ಹಿಂದೆಯೇ ನಗರದಲ್ಲಿ ಪುಸ್ತಕ ಮಳಿಗೆ ಪ್ರಾರಂಭಿಸಿ ಸಾಹಿತ್ಯಾಸಕ್ತರನ್ನು ಹೆಚ್ಚು ಹೆಚ್ಚು ಸೆಳೆದು ಮತ್ತಷ್ಟು ಸಾಹಿತ್ಯಾಭಿರುಚಿ ಮೂಡಿಸುವಲ್ಲಿ ಅಕ್ಷರ ಬುಕ್ಹೌಸ್ ಪಾತ್ರ ಬಹಳ ಮುಖ್ಯವಾಗಿದೆ. ಇಂತಹ ಒಳ್ಳೆಯ ಕಾರ್ಯಕ್ಕೆ ಮುಂದಡಿ ಇಟ್ಟ ಟೈಮ್ಸ್ ಗಂಗಾಧರ್ ಹಾಗೂ ಶಿವಕುಮಾರ್ ಅವರ ಸಾಹಸಕ್ಕೆ ಇಡೀ ಜಿಲ್ಲೆಯೇ ಅಭಿನಂದನೆ ತಿಳಿಸಬೇಕು ಎಂದರು.
ಸುವರ್ಣ ಕರ್ನಾಟಕ ಸಂಭ್ರಮ ಪ್ರಶಸ್ತಿ ಪುರಸ್ಕೃತರಲ್ಲಿ ಮತ್ತೊಬ್ಬರಾದ ಜನಮಿತ್ರ ಪ್ರಧಾನ ಸಂಪಾದಕ ಹೆಚ್.ಬಿ.ಮದನಗೌಡ ಮಾತನಾಡಿ, ಒಂದು ಉತ್ತಮ ಕೆಲಸ ಮಾಡುವಾಗ ಅಡೆ ತಡೆ ಹೆಚ್ಚಾಗಿರುತ್ತವೆ. ಅವೆಲ್ಲವನ್ನೂ ಮೆಟ್ಟಿ ನಿಂತಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದರು.
ಅಕ್ಷರ ಬುಕ್ ಹೌಸ್ ಪ್ರಾರಂಭಿಸುವ ಹಂತದಲ್ಲಿಯೇ ನಕಾರಾತ್ಮಕ ಮಾತುಗಳಿಂದಲೇ ಉತ್ಸಾಹ ಕುಗ್ಗಿಸುವ ಪ್ರಯತ್ನ ಮಾಡಿದವರೇ ಹೆಚ್ಚು. ಅಂತಹ ಸಂದರ್ಭದಲ್ಲಿಯೂ ಎದೆಗುಂದದೆ, ಗಂಗಾಧರ್ ತಮ್ಮ ಉತ್ಸಾಹ ಕುಗ್ಗಿಸಿಕೊಳ್ಳದೆ ಮುಂದೆ ಸಾಗಿದ ಫಲವೇ ಅಕ್ಷರ ಬುಕ್ ಹೌಸ್ನ ದಶಕದ ಇಂದಿನ ಯಶಸ್ಸು. ಯಾವುದೇ ಕೆಲಸವಾದರೂ ಅಚ್ಚುಕಟ್ಟುತನ ಕಾಪಾಡುವ, ಶಿಸ್ತಿನ ಸಂಘಟನೆ ಮಾಡುವ ಸಹೋದರ ಗಂಗಾಧರ್ ಅವರ ಶ್ರಮ ಅಪರಿಮಿತ ವಾಗಿದ್ದು, ಪ್ರತಿ ಜಿಲ್ಲೆಯಲ್ಲಿಯೂ ಅಕ್ಷರ ಪುಸ್ತಕ ಮಳಿಗೆ ರಾರಾಜಿಸಲಿ ಎಂದು ಆಶಿಸಿದರು. ಅಕ್ಷರ ಬುಕ್ಹೌಸ್ ಸಂಸ್ಥಾಪಕ ಬಿ.ಕೆ.ಗಂಗಾಧರ್ ಮಾತನಾಡಿ, ದಶಕಕ್ಕೆ ಕಾಲಿಟ್ಟಿರುವ ಅಕ್ಷರ ಬುಕ್ಹೌಸ್ನ ಎಲ್ಲ ಯಶಸ್ಸು ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಸಲ್ಲಬೇಕು. ಪುಸ್ತಕವನ್ನು ಓದುವವರ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಹೇಳುವವರ ಮಾತಿಗೆ ವ್ಯತಿರಿಕ್ತವಾಗಿ ನಡೆದುಕೊಂಡು ಅಕ್ಷರದ ಯಶಸ್ಸಿಗೆ ಸಹಕರಿಸಿದವರು, ಸಾಹಿತ್ಯಕ್ಕಾಗಿ ಮಿಡಿಯುವ ಜಿಲ್ಲೆಯ ಜನರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.
ಆರಂಭದ ದಿನದಿಂದ ಅಕ್ಷರ ನಮ್ಮದು ಎಂದು ಸದಾ ಅಕ್ಷರದ ಜೊತೆಗೆ ನಿಂತ ಸ್ನೇಹಿತರನ್ನು ಸ್ಮರಿಸಲೇಬೇಕು. ಅಕ್ಷರ ಬುಕ್ ಹೌಸ್ ಈ ಜಿಲ್ಲೆಯ ಸಾಹಿತ್ಯ ಬಳಗದ್ದು, ಹೊಸ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಕಾರ್ಯಕ್ರಮ ಮಾಡುತ್ತಿದ್ದು, ಮುಂದೆಯೂ ಉತ್ತಮ ಕಾರ್ಯಕ್ರಮ ಮಾಡಲು ನಿಮ್ಮಗಳ ಸಹಕಾರ ಅತ್ಯಗತ್ಯ. ಅಕ್ಷರವನ್ನು ಕೈಹಿಡಿದು ನಡೆಸುವ ಹೊಣೆಗಾರಿಗೆ ಜಿಲ್ಲೆಯ ಸಾಹಿತ್ಯ ಪ್ರಿಯರದ್ದು ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಪಿ.ಶಿವಕುಮಾರ್, ಸಾಹಿತಿ ಸುಶೀಲ ಸೋಮಶೇಖರ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನಕುಮಾರ್, ಪತ್ರಕರ್ತ ನಾಗರಾಜ್ ಹೆತ್ತೂರು, ಅರ್ಜುನ್, ಮಂಜುನಾಥ್ ಹಾಗೂ ಅನೇಕ ಸಾಹಿತ್ಯ ಪ್ರಿಯರು ಇದ್ದರು.