ಹಾಸನ ಟಾಪ್ ನ್ಯೂಸ್
– ಕುಡಿಯಲು ಹಣ ಕೊಡಲಿಲ್ಲ ಎಂದು ತಂದೆ ಕೊಂದ ಪಾಪಿ ಮಗ!
– ಕುಡಿಯಲು ಹಣ ಹಾಗೂ ಬೈಕ್ ಕೀ ಕೊಡಲಿಲ್ಲ ಎಂದು ಕೊಲೆ
– ಜೋಡಿ ಆನೆ ಪ್ರತ್ಯಕ್ಷ: 50ಕ್ಕೂ ಕಾಡಾನೆಗಳ ಉಪಟಳ!
NAMMUR EXPRESS NEWS
ಬೇಲೂರು: ಕುಡಿಯಲು ಹಣ ಹಾಗೂ ಬೈಕ್ ಕೀ ಕೊಡಲಿಲ್ಲ ಎಂಬ ಕಾರಣಕ್ಕೆ ಮಗನೇ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ಶಶಿಧರ್ ಪೂಜಾರಿ(೬೪) ಮೃತರು. ಹಿರಿಯ ಮಗ ದಿನೇಶ(೩೫) ಎಂಬಾತ ಈ ಕೃತ್ಯ ಎಸಗಿದ್ದು, ಹಂತಕನನ್ನು ಅರೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾಗಿರುವ ಶಶಿಧರ್ ಪೂಜಾರಿ-ಕಲ್ಯಾಣಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಮೊದಲನೇ ಮಗ ದಿನೇಶನಿಗೆ ಮದುವೆ ಮಾಡಲಾಗಿತ್ತು. ಆದರೆ ಸಂಸಾರ ಹಳಿತಪ್ಪಿ ವಿಚ್ಚೇದನ ಆಗಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ. ೨ನೇ ಮಗಳು ಆಶಾ(೩೨), ಮಂಗಳೂರಿನ ಮಾಲ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ದಿನೇಶ ವಿಪರೀತ ಕುಡಿಯುವ ಚಟ ಹೊಂದಿದ್ದು, ಪ್ರತಿದಿನ ಕುಡಿದು ಬಂದು ತಂದೆ-ತಾಯಿಯೊಂದಿಗೆ ಜಗಳ ಆಡುತ್ತಿದ್ದ. ಮತ್ತಷ್ಟು ಕುಡಿಯಲು ದುಡ್ಡು ಕೊಡುವಂತೆ ಪ್ರತಿ ದಿನ ಗಲಾಟೆ ಮಾಡುತ್ತಿದ್ದ. ಹಣ ಕೊಡದೆ ಇದ್ದರೆ ಹಲ್ಲೆ ಮಾಡಿ ತೊಂದರೆ ಕೊಡುತ್ತಿದ್ದ. ಆರೋಪಿ ದಿನೇಶ್ ತಾಯಿ ಕಲ್ಯಾಣಿ ಅವರು, ಅರೇಹಳ್ಳಿಯ ಸಂತೋಷನಗರದಲ್ಲಿರುವ ಅಣ್ಣ ರಾಜು ಎಂಬುವರಿಗೆ ಸಂಜೆ ೭.೩೦ ರಲ್ಲಿ ದೂರವಾಣಿ ಕರೆ ಮಾಡಿ
ದಿನೇಶ ಕುಡಿದು ಬಂದು ಗಲಾಟೆ ಮಾಡಿ ಕುಡಿಯಲು ಹಣ ನೀಡುವಂತೆ ಹಾಗೂ ಬೈಕ್ ಕೀ ನೀಡುವಂತೆ ಕೇಳಿದ. ನಾವು ಹಣ ಮತ್ತು ಬೈಕ್ ಕೀ ಕೊಡದೇ ಇದ್ದಾಗ ನನ್ನ ಪತಿ ಶಶಿಧರ್ ಪೂಜಾರಿ ಅವರಿಗೆ ವಿಪರೀತ ಹೊಡೆದು, ಎದೆಗೆ ಕಾಲಿನಿಂದ ನಾಲ್ಕೈದು ಬಾರಿ ತುಳಿದಿದ್ದಾರೆ. ಪತಿ ಎದೆ ನೋವು ಎಂದು ಬಿದ್ದು ಒದ್ದಾಡುತ್ತಿದ್ದಾರೆಂದು ತಿಳಿಸಿದರು. ಕೂಡಲೇ ಅಲ್ಲಿಗೆ ದೌಡಾಯಿಸಿದ ರಾಜು ಹಾಗೂ ಇತರರು, ಶಶಿಧರ್ ಅವರನ್ನು ಅರೇಹಳ್ಳಿ ಆಸ್ಪತ್ರೆಗೆ ಕರೆತಂದರು. ಆದರೆ ವೈದ್ಯರು ಚಿಕಿತ್ಸೆ ಕೊಡುತ್ತಿರುವಾಗಲೇ ಶಶಿಧರ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿಯೇ ರಾತ್ರಿ ೮.೩೦ ರ ಸುಮಾರಿಗೆ ಮೃತಪಟ್ಟಿದ್ದಾರೆ.
ಹೃದಯಾಘಾತ ನಾಟಕ:ಆದರೆ ತಂದೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿ, ಎದೆ ಭಾಗಕ್ಕೆ ಬಲವಾಗಿ ಒದ್ದು ಜೀವ ತೆಗೆದ ಪಾಪಿ ಪುತ್ರ, ಹೃದಯಾಘಾತ ತಂದೆ ಮೃತಪಟ್ಟರು ಎಂದು ಬಿಂಬಿಸಲು ನಾಟಕ ಆಡಿದ್ದ. ಕುಡಿದ ಮತ್ತಿನಲ್ಲಿ ಮಾಡಬಾರದ್ದನ್ನು ಮಾಡಿದ ಪಾಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮೃತರ ಸಂಬಂಧಿಕರು ನೀಡಿದ ದೂರಿನ ಮೇಲೆ ಆರೋಪಿಯನ್ನು ಬಂಧಿಸಿ ಅರೇಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜೋಡಿ ಆನೆ ಪ್ರತ್ಯಕ್ಷ: 50ಕ್ಕೂ ಕಾಡಾನೆಗಳ ಉಪಟಳ!
ಬೇಲೂರು ತಾಲ್ಲೂಕಿನ, ಮಲ್ಲಾಪುರ-ಮೊವ್ವಲ ರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಜೋಡಿ ಕಾಡಾನೆ ಕಾಣಿಸಿಕೊಂಡು ಆತಂಕ ಮೂಡಿಸಿದ್ದವು.
ರಸ್ತೆಯಲ್ಲಿ ನಿಧಾನವಾಗಿ ನಡೆಯುತ್ತ ಬಂದ ಎರಡು ಸಲಗಗಳನ್ನು ಕಂಡ ವಾಹನ ಸವಾರರು, ಭಯಭೀತರಾಗಿ ರಸ್ತೆಯಲ್ಲಿಯೇ ತಮ್ಮ ತಮ್ಮ ವಾಹನ ನಿಲ್ಲಿಸಿಕೊಂಡು ಕೆಲ ಹೊತ್ತು ನಿಲ್ಲಬೇಕಾಯಿತು. ಯಾರಿಗೂ ಕೇರ್ ಮಾಡದೆ ಕೆಲ ದೂರ ರಸ್ತೆಯಲ್ಲಿ ನಡೆದುಕೊಂಡು ಬಂದು ಆನೆಗಳು, ನಂತರ ಕಾಫಿ ತೋಟದೊಳಗೆ ಹೋದವು.
ಕಾಫಿ ತೋಟಕ್ಕೆ ಕಾಡಾನೆಗಳು ಹೋದ ನಂತರ ವಾಹನ ಸವಾರರು ತೆರಳಿದರು. ಈಗಲೂ ಆನೆಗಳು ಕಾಫಿ ತೋಟದಲ್ಲಿ ಬೀಡುಬಿಟ್ಟಿವೆ. ಬೇಲೂರು ಭಾಗದಲ್ಲಿ ಸುಮಾರು 50ಕ್ಕೂ ಕಾಡಾನೆ ಹಿಂಡು ನೆಲೆಸಿದ್ದು, ಈಗಾಗಲೇ ಕಾಡಾನೆಗಳ ಉಪಟಳದಿಂದ ಜನರು, ರೈತರು ಹಾಗೂ ಕಾಫಿ ಬೆಳೆಗಾರರು ಹೈರಾಣಾಗಿದ್ದಾರೆ.