ಬೇಲೂರಲ್ಲಿ ಮದವೇರಿದ ಸಲಗ ಸಂಚಾರ!
– ರಸ್ತೆ ಸವಾರರಿಗೆ ಜೀವ ಭಯ: ತೋಟಕ್ಕೆ ನುಗ್ಗಿದ ಆನೆ
– ಯುವಕರಿಂದ ವಿಡಿಯೋ ಮಾಡುತ್ತ ಹುಚ್ಚಾಟ
NAMMUR EXPRESS NEWS
ಬೇಲೂರು: ಮದವೇರಿದ ಒಂಟಿ ಸಲಗ ಹಾಡು ಹಗಲೇ ರಸ್ತೆಗಿಳಿದು
ಹೆಜ್ಜೆ ಹಾಕುವ ಮೂಲಕ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ದರ್ಬಾರ್ ಪೇಟೆಯಲ್ಲಿ ನಡೆದಿದೆ.
ಮೈಮೇಲೆ ಮಣ್ಣು ಸುರಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಕಾಡಾನೆ ಬಂದಿದ್ದನ್ನು ಕಂಡ ವಾಹನ ಸವಾರರು, ಆತಂಕದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ನಿಲ್ಲಬೇಕಾಯಿತು.
ಈ ನಡುವೆ ಗ್ರಾಮದ ಕೆಲ ಯುವಕರು ಕಾಡಾನೆ ಹತ್ತಿರ ಹೋಗಿ ವಿಡಿಯೋ ಮಾಡುತ್ತ ಹುಚ್ಚಾಟ ಪ್ರದರ್ಶಿಸಿದರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಲಗ, ರಸ್ತೆಯಲ್ಲಿ ನಡೆದು ಸಾಗಿ ನಂತರ ಕಾಫಿ ತೋಟದೊಳಗೆ ಹೋಯಿತು.
ಕಾಡಾನೆ ಕಾಫಿ ತೋಟದೊಳಗೆ ಬರುತ್ತಿದ್ದಂತೆಯೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ಭಯದಿಂದ ಕಾಫಿ ತೋಟದಿಂದ ಹೊರಗೆ ಬಂದಿದ್ದಾರೆ. ಒಂಟಿಸಲಗ ಕಾಫಿ ತೋಟದಲ್ಲೇ ಬೀಡು ಬಿಟ್ಟಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ದೌಡಾಯಿಸಿದ್ದಾರೆ.
ಕಾಡಾನೆ ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಶಾಶ್ವತ ಪರಿಹಾರ ಕಂಡು ಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ರೈತರು ಹಾಗೂ ಕಾಫಿ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.