ಮಲೆನಾಡು ಭಾಗದಲ್ಲಿ ನಿಲ್ಲದ ಗಜ ಗಲಾಟೆ!
– ಕಷ್ಟಪಟ್ಟು ಬೆಳೆದಿದ್ದ ಭತ್ತ ಸೇರಿ ಅನೇಕ ಬೆಳೆ ಕಾಡಾನೆ ಪಾಲು
– ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ವಿವಿಧೆಡೆ ಕಾಡಾನೆ ಹಾವಳಿ ಮುಂದುವರಿದಿದ್ದು, ಕಷ್ಟಪಟ್ಟು ಬೆಳೆದಿದ್ದ ಭತ್ತ ಮೊದಲಾದ ಬೆಳೆ ಇನ್ನೇನು ದುಡಿದವನಿಗೆ ಅನ್ನ ಆಗಬೇಕು ಅನ್ನುವಷ್ಟರಲ್ಲಿ ಮಣ್ಣು ಪಾಲಾಗುತ್ತಿದೆ.
ಗಜಪಡೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿರುವುದು ನಿರಂತರವಾಗಿದೆ. ತಾಲ್ಲೂಕಿನ, ಬೊಬ್ಬನಹಳ್ಳಿ ಗ್ರಾಮದಲ್ಲಿ ಇನ್ನೇನು ಕಟಾವು ಮಾಡಬೇಕಿದ್ದ ಭತ್ತ, ಬೈನೆ ಮರ, ಬಾಳೆ, ಕಾಫಿ, ಅಡಕೆ ಬೆಳೆಗಳನ್ನು ಕಾಡಾನೆ ಹಿಂಡು ತುಳಿದು ನಾಶ ಮಾಡಿವೆ. ಮರಗಳನ್ನು ಬುಡಮೇಲು ಮಾಡಿವೆ. ಗ್ರಾಮದ ಬಿ.ಡಿ.ಮಲ್ಲೇಶ್ವರ ನಿಂಗೇಗೌಡ ಹಾಗೂ ಇತರೆ ರೈತರಿಗೆ ಸೇರಿದ ತೆನೆ ಕಟ್ಟಿದ್ದ ಭತ್ತದ ಬೆಳೆಯನ್ನು ಸಂಪೂರ್ಣ ತಿಂದು ತುಳಿದು ನಾಶ ಮಾಡಿವೆ. ಇದು ಅನ್ನದಾತನನ್ನು ಅಕ್ಷರಶಃ ಕಂಗೆಡಿಸಿದೆ. ಅರಣ್ಯ ಇಲಾಖೆ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಕೈ ಚೆಲ್ಲಿ ಕುಳಿತಿದೆ. ನಿರಂತರ ಕಾಡಾನೆ ಹಾವಳಿಯಿಂದ ಕಾಫಿ ಬೆಳೆಗಾರರು ಹಾಗೂ ರೈತರು, ಅಕ್ಷರಶಃ ಹೈರಾಣಾಗಿ ಹೋಗಿದ್ದಾರೆ. ಬೆಳೆದಿದ್ದ ಬೆಳೆ ಹಾಳಾಗಿ ಹೋಯಿತು. ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರವನ್ನಾದರೂ ಕೊಡಿ ಎಂದು ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ. ಇಷ್ಟೆಲ್ಲಾ ನಷ್ಟ ಆದರೂ, ಅರಣ್ಯ ಇಲಾಖೆಯವರು ಸ್ಥಳಕ್ಕೆ ಬರುತ್ತಿಲ್ಲ, ರೈತರ ಸಮಸ್ಯೆ ಆಲಿಸುತ್ತಿಲ್ಲ ಎಂದು ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಗ್ರಾಮಕ್ಕೆ ಸಲಗ ಎಂಟ್ರಿ:
ಆಲೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮಕ್ಕೆ ಮುಂಜಾನೆ ವೇಳೆ ಭಾರೀ ಗಾತ್ರದ ಒಂಟಿ ಸಲಗವೊಂದು ಬಂದಿದೆ.
ಮುಂಜಾನೆ ಹಾಗೂ ಚಳಿಯಾದ್ದರಿಂದ ಗ್ರಾಮಸ್ಥರೂ ಹೊರಗೆ ಬಂದಿರಲಿಲ್ಲ. ಒಂದು ಕೂಲ್ ಆಗಿದ್ದ ವಾತಾವರಣದಲ್ಲಿ ದೈತ್ಯಾಕಾರದ ಸಲಗ ಗ್ರಾಮದೊಳಗೆ ಹೆಜ್ಜೆ ಹಾಕಿತು. ನಾಯಿ ಬೊಗಳಲು ಆರಂಭಿಸಿದರೂ, ಜನರು ಹೊರಗೆ ಬರಲಿಲ್ಲ, ಸಲಗ ತನ್ನ ಪಾಡಿಗೆ ತಾನು ಒಂದು ಲಡೆಯಿಂದ ಮತ್ತೊಂದು ಕಡೆಗೆ ಸಾಗಿತು. ಜನರ ಓಡಾಟ ಅಥವಾ ಸಂದಣಿ ಇಲ್ಲದೆ ಕಾರಣ, ಯಾವುದೇ ಅನಾಹುತ ಘಟಿಸಲಿಲ್ಲ. ನಿಧಾನಗತಿಯಲ್ಲಿ ಕಾಡಾನೆ ಹೆಜ್ಜೆ ಹಾಕುವ ದೃಶ್ಯಾವಳಿ ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿ, ಎಲ್ಲೆಡೆ ವೈರಲ್ ಆಗಿದೆ.