ವಕ್ಫ್ ಆಸ್ತಿ ವಿವಾದ: ಹಾಸನದಲ್ಲಿ ಬಿಜೆಪಿ ಹೋರಾಟ
– ಜನ ಜಾಗೃತಿ ಆಂದೋಲನ: ಸಮಸ್ಯೆಗೆ ಸಿಲುಕಿದವರ ದೂರು ಸ್ವೀಕಾರ
– ಜಮೀರ್ ಅಹಮದ್ ರಾಜೀನಾಮೆಗೆ ಪಟ್ಟು
NAMMUR EXPRESS NEWS
ಹಾಸನ: ವಕ್ಫ್ ಆಸ್ತಿ ಕಬಳಿಕೆ ವಿರೋಧಿಸಿ, ಇದಕ್ಕೆ ರಾಜ್ಯ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿ ನಗರದಲ್ಲೂ ಜಿಲ್ಲಾ ಬಿಜೆಪಿ ವತಿಯಿಂದ ನಮ್ಮ ಭೂಮಿ, ನಮ್ಮ ಹಕ್ಕು ಶೀರ್ಷಿಕೆಯಡಿ ಜನ ಜಾಗೃತಿ ಆಂದೋಲನ ನಡೆಯಿತು.
ಡಿಸಿ ಕಚೇರಿ ಆವರಣದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಧರಣಿ ಹಮ್ಮಿಕೊಂಡು ವಕ್ಫ್ ಬೋರ್ಡ್ನಿಂದ ಸಮಸ್ಯೆಗೆ ಸಿಲುಕಿರುವವರಿಂದ ಅಹವಾಲು ಸ್ವೀಕರಿಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷರಾದ ನವಿಲೆ ಅಣ್ಣಪ್ಪ, ರೇಣುಕುಮಾರ್ ಮೊದಲಾದವರು, ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯವನ್ನು ಓಲೈಸುವ ಏಕೈಕ ಉದ್ದೇಶದಿಂದ ಹಿಂದೂಗಳಿಗೆ ಹಾಗೂ ಬಡಪಾಯಿ ರೈತರಿಗೆ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದರು.
ಇಷ್ಟೆಲ್ಲಾ ಗೊಂದಲಗಳಿಗೆ ಕಾರಣರಾಗಿರುವ ವಕ್ಫ್ ಸಚಿವ ಜಮೀರ್ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಇಡೀ ನಾಡಿಗೆ, ಸಮಸ್ತ ಜನರಿಗೆ ಮುಖ್ಯಮಂತ್ರಿ ಎಂಬುದನ್ನು ಮರೆತು ಕೆಲ ಸಚಿವರ ತಾಳಕ್ಕೆ ಕುಣಿಯುವ ಮೂಲಕ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಹಾಲಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಭೂಮಿ ನಂಬಿ ಬದುಕುತ್ತಿರುವ ರೈತರು, ಇಂದು ಪಹಣಿ ಯಾರ ಹೆಸರಿನಲ್ಲಿದೆ ಎಂದು ಹುಡುಕುವಂತೆ ಮಾಡಿರುವುದು ನಿಜಕ್ಕೂ ದುರದೃಷ್ಟಕರ ಎಂದರು. ಈ ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳು ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಇದರ ನಡುವೆ ರುದ್ರಭೂಮಿ ಸೇರಿದಂತೆ ಜನರ ಆಸ್ತಿ ಕಬಳಿಸಲು ಸರ್ಕಾರ ಮುಂದಾಗಿದೆ ಎಂದು ದೂರಿದರು.
ಈ ಮೂಲಕ ಒಂದು ಜಾತಿ ಓಲೈಸಲು ಇಡೀ ಸಮಾಜ ಒಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸರ್ಕಾರದ ವಿರುದ್ಧ ಇಂದು ಸಾಂಕೇತಿಕ ಹೋರಾಟ ಮಾಡುತ್ತಿದ್ದೇವೆ. ಕೂಡಲೇ ತನ್ನ ತಪ್ಪು ತಿದ್ದು ಕೊಳ್ಳದೇ ಇದ್ದರೆ ಎಲ್ಲೆಡೆ ಹೋರಾಟ ತೀವ್ರಗೊಳ್ಳಲಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ವೇಳೆ ಬೃಹತ್ ಹೋರಾಟವನ್ನು ನಮ್ಮ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದು. ಅಂದು ಸಮಾವೇಶ ಕೂಡ ನಡೆಯಲಿದೆ ಎಂದರು. ಇಂದು ಸಂಜೆವರೆಗೆ ನೊಂದರ ರಐತರ ಅಹವಾಲು ಸ್ವೀಕರಿಸಿ ಡಿಸಿ ಅವರ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂರು.
ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ನುಗ್ಗೇಹಳ್ಳಿಯ ಅಮ್ಮೇನಹಳ್ಳಿ ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಬೆಂಬಲ ಸೂಚಿಸಿದ್ದರು.
ಪ್ರತಿಭಟನೆಯಲ್ಲಿ ರೈತಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿಗಳಾದ ಅಮಿತ್ ಶೆಟ್ಟಿ, ಗಿರೀಶ್, ಮುಖಂಡರಾದ ವೇಣುಗೋಪಾಲ್, ಆರ್.ಮೋಹನ್ ಕುಮಾರ್, ಮಂಜು, ವೇದಾವತಿ ಮೊದಲಾದವರಿದ್ದರು.