-ರೋಗಾಣುಗಳಿಗೆ ಮುಕ್ತ ಮಾರ್ಗ ನೀಡದಿರಿ
ಹೊಸ ಬಟ್ಟೆ ಯಾರಿಗೆ ಇಷ್ಟವಿಲ್ಲ? ಅದರಲ್ಲೂ ಹೊಸ ನಮೂನೆಯ ಬಟ್ಟೆಗಳು ಬಂದರೆ ಆದಷ್ಟೂ ಬೇಗನೇ ಇವನ್ನು ತೊಟ್ಟು ಸಂಭ್ರಮಿಸುವ ಅವಕಾಶವನ್ನು ಬಿಡಲು ಯಾರೂ ಸಿದ್ಧರಿರುವುದಿಲ್ಲ. ಆದರೆ ಹೊಸ ಬಟ್ಟೆ ಕೊಂಡ ಬಳಿಕ ಒಗೆಯದೇ ನೇರವಾಗಿ ತೊಟ್ಟುಕೊಂಡರೆ ಕೆಲವಾರು ತೊಂದರೆಗಳು ಎದುರಾಗಬಹುದು .ಹಲವಾರು ಹೊಸ ಬಟ್ಟೆ ಸಾಮಾನ್ಯವಾಗಿ ಸ್ವಚ್ಛ ಸ್ಥಿತಿಯಲ್ಲಿಯೇ ಇರುತ್ತದೆ. ನಯವಾದ ಇಸ್ತ್ರಿ, ಹೊಳಪಿನ ಮೇಲ್ಮೆ, ಗಮನ ಸೆಳೆಯುವ ಪ್ಯಾಕಿಂಗ್ ಇವೆಲ್ಲಾ ಒಗೆಯುವುದೇಕೆ ಎಂಬ ಪ್ರಶ್ನೆಯನ್ನು ಒಡ್ಡಬಹುದು.
ಆದರೆ ವಾಸ್ತವದಲ್ಲಿ ಈ ಅಭ್ಯಾಸದಿಂದ ಕೆಲವು ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು. ಮಾರುಕಟ್ಟೆಯಿಂದ ಬಟ್ಟೆಗಳನ್ನು ತಂದ ನಂತರ, ಅವುಗಳನ್ನು ಒಗೆಯದೇ, ಹಾಗೇ ನೇರವಾಗಿ ಧರಿಸುವುದು ಸುರಕ್ಷಿತವಲ್ಲ.
ಹೊಸ ಬಟ್ಟೆಯಲ್ಲಿಯೂ ಸೂಕ್ಷ್ಮಜೀವಿಗಳು ಇರಬಹುದು, ಬಟ್ಟೆಗಳನ್ನು ತಯಾರಿಸಿದಾಗ, ಆ ಬಟ್ಟೆಗಳನ್ನು ಎಲ್ಲಿ ತಯಾರಿಸಲಾಗುತ್ತದೆ ಮತ್ತು ಎಲ್ಲಿ ಸಂಗ್ರಹಿಸಲಾಗುತ್ತದೆ, ಸಾಗಾಣಿಕಾ ಸಮಯದಲ್ಲಿ ಯಾವ ಬಗೆಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು, ಎಂಬ ಅರಿವು ನಿಮಗಿರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ, ಪ್ರತಿಯೊಬ್ಬರೂ ಖರೀದಿಸುವ ಮೊದಲು ಬಟ್ಟೆಗಳನ್ನು ತೊಟ್ಟು ತಾವು ಹೇಗೆ ಕಾಣಿಸಿಕೊಳ್ಳುತ್ತೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಯತ್ನಿಸುತ್ತಾರೆ. ಈ ಬಟ್ಟೆಗಳನ್ನು ಹಾಗೇ ಧರಿಸುವ ಮೂಲಕ ರೋಗಾಣುಗಳನ್ನು ನಾವೇ ನಮ್ಮ ದೇಹಕ್ಕೆ ಮುಕ್ತ ಆಹ್ವಾನ ನೀಡಿದಂತೆ.
ಬಟ್ಟೆಗಳನ್ನು ತಯಾರಿಸುವಾಗ ಬಳಸುವ ರಾಸಾಯನಿಕಗಳು ಉಳಿದುಕೊಂಡಿರಬಹುದು. ಜಗತ್ತಿನಲ್ಲಿ ತಯಾರಾಗುವ ಬಹುತೇಕ ಎಲ್ಲಾ ಬಟ್ಟೆಗಳೂ ಈಗ ಸಿದ್ಧ ಉಡುಪುಗಳ ರೂಪದಲ್ಲಿ ನಮ್ಮ ನಗರಗಳಲ್ಲಿ ಲಭ್ಯವಾಗುತ್ತಿವೆ. ಇವುಗಳನ್ನು ತಯಾರಿಸುವಾಗ ಹಲವಾರು ಬಗೆಯ ಬಣ್ಣಗಳು ಅಥವಾ ಡೈ ಗಳು, ಕೃತಕ ನೂಲು, ಪಿಷ್ಟಕಾರಕ, ಹಾಗೂ ಇತರ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಹೊಳಪು ನೀಡಲು ರಾಸಾಯನಿಕಗಳನ್ನು ಬಳಸಬಹುದು. ಆದ್ದರಿಂದ ಬಟ್ಟೆ ಎಷ್ಟೇ ಸ್ವಚ್ಛವಾಗಿರುವಂತೆ ಕಂಡರೂ ಸರಿ, ಒಮ್ಮೆ ಒಗೆದು ಇಸ್ತ್ರಿ ಮಾಡದೆ ಸರ್ವಥಾ ತೊಡಬಾರದು. ಅದರಲ್ಲೂ ವಿಶೇಷವಗಿ ಒಳ ಉಡುಪುಗಳನ್ನು ಒಗೆದು ಎರಡೂ ಬದಿಗಳಲ್ಲಿ ಚೆನ್ನಾಗಿ ಇಸ್ತ್ರಿ ಮಾಡಿಯೇ ತೊಡಬೇಕು.