ಬಾಳೆತೋಟ ಕಾಯಲು ಬಂದ ನಟಿಯರು!
– ರಿಪ್ಪನಪೇಟೆಯ ರೈತ ವಿಭಿನ್ನ ಪ್ರಯೋಗ
– ಜನರ ದೃಷ್ಟಿ, ಪ್ರಾಣಿಗಳು ಬಾರದಂತೆ ಫೋಟೋ
NAMMUR EXPRESS NEWS
ಹೊಸನಗರ: ಮಳೆ ಇಲ್ಲದೇ ಬೆಳೆದ ಅಲ್ಪ ಸ್ವಲ್ಪ ಬೆಳೆಯನ್ನು ಕಾಪಾಡಿಕೊಳ್ಳೋದು ರೈತರಿಗೆ ದೊಡ್ಡ ಸವಾಲು ಆಗಿದೆ. ಮಲೆನಾಡು, ಅರಣ್ಯ ಗಡಿ ವ್ಯಾಪ್ತಿಯಲ್ಲಿರೋ ರೈತರು ಬೆಳೆಯ ರಕ್ಷಣೆಗಾಗಿ ಹಲವು ಉಪಾಯಗಳನ್ನು ಮಾಡುತ್ತಾರೆ. ತೋಟದಲ್ಲಿ ಜನರಿದ್ದಾರೆ ಎಂದು ತೋರಿಸಲು ಬೆದರು ಗೊಂಬೆಗಳನ್ನು ಹಾಕುತ್ತಾರೆ. ಇನ್ನು ಕೆಲವರು ಬೆಳೆಗೆ ದೃಷ್ಟಿಯಾಗದಿರಲಿ ಎಂದು ದೃಷ್ಟಿ ಗೊಂಬೆಗಳನ್ನು ಸಹ ಅಳವಡಿಸುವುದನ್ನು ನೋಡಿದ್ದೇವೆ. ಆದರೆ ತೋಟದ ಮರಗಳಿಗೆ ನಟಿ ಮಣಿಯರ ಫೋಟೋ ಹಾಕಿರುವುದು ವೈರಲ್ ಆಗಿದೆ. ಈ ಹಿಂದೆ ಕೋಲಾರದಲ್ಲಿ ಭತ್ತದ ಬೆಳೆಗೆ ದೃಷ್ಟಿಯಾಗದಿರಲಿ ಎಂದು ಗದ್ದೆಯಲ್ಲಿ ನಟಿ ಸನ್ನಿ ಲಿಯೋನ್ ಸೇರಿದಂತೆ ಹಲವರ ಬ್ಯಾನರ್ ಗಳನ್ನು ಹಾಕಲಾಗಿತ್ತು. ಇದೀಗ ಇಂತಹವುದೇ ಪ್ರಯೋಗಕ್ಕೆ ಮಲೆನಾಡಿನ ರೈತನೋರ್ವ ಮುಂದಾಗಿದ್ದಾನೆ. ರಸ್ತೆ ಬದಿಯಲ್ಲಿರೋ ತಮ್ಮ ಬಾಳೆತೋಟಕ್ಕೆ ನಟಿಯರ ಫೋಟೋ ಹಾಕಿಸಿದ್ದಾರೆ.
ಹೊಸನಗರದ ರಿಪ್ಪನ್ ಪೇಟೆ ಬೆಳೆಯ ಮಳವಳ್ಳಿ ಗ್ರಾಮದ ರೈತ ರಂಗಸ್ವಾಮಿ ಈ ವಿಭಿನ್ನ ಪ್ರಯೋಗ ಮಾಡಿದ್ದಾರೆ. ಸದ್ಯ ತೋಟದಲ್ಲಿ ಅಳವಡಿಸಲಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ರೈತ ರಂಗಸ್ವಾಮಿ ಎರಡು ಎಕರೆಯಲ್ಲಿ ಬಾಳೆ ಬೆಳೆದಿದ್ದಾರೆ. ಬೆಳೆಯು ಉತ್ತಮವಾಗಿದ್ದು, ಬಾಳೆ ತೋಟಕ್ಕೆ ದೃಷ್ಟಿ ಆಗಬಾರದೆಂದು ನಟಿಯರ ಫೋಟೋ ಹಾಕಿದ್ದಾರೆ. ತೋಟದ ಸುತ್ತಲೂ ರಸ್ತೆ ಬದಿಯಲ್ಲಿ ಜನರಿಗೆ ಕಾಣುವಂತೆ ನಟಿಯರ ಫೋಟೋಗಳನ್ನು ರಂಗಸ್ವಾಮಿ ಹಾಕಿದ್ದಾರೆ. ಗ್ರಾಮಸ್ಥರು ಈ ಫೋಟೋಗಳನ್ನು ನೋಡಲು ಬರುತ್ತಿದ್ದಾರೆ.
ಹಲವು ಬಾರಿ ದೃಷ್ಟಿಗೊಂಬೆಗಳನ್ನ ಇಟ್ಟು ಯಾವುದೇ ಪ್ರಯೋಜನವಾಗದ ನಂತರ ನಟಿಯರ ಫೋಟೋವನ್ನು ದೃಷ್ಟಿ ಗೊಂಬೆ ಜಾಗದಲ್ಲಿ ಇರಿಸಿದ್ದೇನೆ ಎಂದು ರಂಗಸ್ವಾಮಿ ಹೇಳಿದ್ದಾರೆ. ನಟಿಯರ ಫೋಟೋವನ್ನು ಜನರು ನೋಡಿಕೊಂಡು ಖುಷಿಯಿಂದ ಮುಂದೆ ಹೋಗುತ್ತಾರೆ. ಕೆಲವರು ರಾತ್ರಿ ವೇಳೆ ಫೋಟೋವನ್ನು ನೋಡಿ ಕೇಕೆ ಹಾಕುತ್ತಾರೆ ಎಂದು ರಂಗಸ್ವಾಮಿ ಹೇಳಿದ್ದಾರೆ. ಒಟ್ಟಿನಲ್ಲಿ ಜನರು ನಟಿಯರ ಫೋಟೋ ನೋಡುವುದರಿಂದ ಬಾಳೆ ಗಿಡಗಳಿಗೆ ಜನರ ದೃಷ್ಟಿ ತಾಗುವುದಿಲ್ಲ ಎಂಬ ಮಾಲೀಕರ ನಂಬಿಕೆ ಕುತೂಹಲ ಮೂಡಿಸಿದೆ.