ಹೊಸನಗರಕ್ಕೆ ವಿಧಾನಸಭೆ ಬೇಕು: ಮತ್ತೆ ಹೋರಾಟ?!
– ಪ್ರತ್ಯೇಕ ವಿಧಾನ ಸಭಾ ಕ್ಷೇತ್ರ ರಚಿಸಲು ಸಿಎಂಗೆ ಪತ್ರ
– ಯಾವ ಸರ್ಕಾರ ಬಂದ್ರೂ ಈ ಕಡೆ ನೋಡೋದೇ ಇಲ್ಲ
– ನಾಡಿಗೆ ಬೆಳಕು ಕೊಟ್ಟವರ ಬದುಕು ಕತ್ತಲಲ್ಲಿ!
NAMMUR EXPRESS NEWS
ಹೊಸನಗರ: ಹೊಸನಗರ ಮುಳುಗಡೆ ಸಂತ್ರಸ್ಥ ತಾಲೂಕಾಗಿದ್ದು, ತನ್ನ ವಿಧಾನಸಭಾ ಕ್ಷೇತ್ರ ಕಳೆದುಕೊಂಡಿದ್ದು, ಜನಸಾಮಾನ್ಯರಿಗೆ ಶಾಪವಾಗಿ ಪರಿಣಮಿಸಿದೆ. ಯಾವುದೇ ಸರ್ಕಾರ ಬಂದ್ರೂ ಇಲ್ಲಿನ ಜನರ ಕಷ್ಟ ಕೇಳೋರಿಲ್ಲ.
ತೀರ್ಥಹಳ್ಳಿ ಮತ್ತು ಸಾಗರ ವಿಧಾನ ಸಭಾ ಕ್ಷೇತ್ರಕ್ಕೆ ಹರಿದು ಹಂಚಿ ಹೋಗಿರುವ ಕ್ಷೇತ್ರ ಸಮಸ್ಯೆಗಳ ಬೆಟ್ಟ ಹೊತ್ತುಕೊಂಡು ನಿಂತಿದೆ. ಕಾಂಗ್ರೆಸ್, ಬಿಜೆಪಿ, ದಳ ಯಾವುದೇ ಸರ್ಕಾರ ಬಂದರೂ ಇಲ್ಲಿನ ಜನರಿಗೆ ಕನಿಷ್ಠ ನ್ಯಾಯವೂ ಸಿಗುತ್ತಿಲ್ಲ.ಒಮ್ಮೆ ಪ್ರತ್ಯೇಕ ವಿಧಾನ ಸಭಾ ಹೋರಾಟದ ಕೂಗು ಕೇಳಿ ಬಂತಾದರೂ ಮತ್ತೆ ರಾಜಕೀಯದ ಮ್ಯಾಜಿಕ್ ಅದನ್ನು ಮುಚ್ಚಿ ಹಾಕಿತು. ಇದೀಗ ಮತ್ತೆ ಸಣ್ಣ ಹೋರಾಟದ ದನಿ ಕೇಳಿ ಬಂದಿದೆ.
ಸಿಎಂಗೆ ಪತ್ರ!: ಮುಂಬರುವ ವಿಧಾನಸಭಾ ಚುನಾವಣೆಯ ಒಳಗಾಗಿ ಹೊಸನಗರ ತಾಲೂಕು ವಿಧಾನಸಭಾ ಕ್ಷೇತ್ರ ಮಾನ್ಯತೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪತ್ರದ ಮೂಲಕ ತಾಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷರ ಒಕ್ಕೂಟ ಒತ್ತಾಯಿಸಿದೆ. ಈ ವಿಷಯಕ್ಕೆ ಸಂಬಂಸಿದಂತೆ ಒಕ್ಕೂಟದ ಅಧ್ಯಕ್ಷ ಎಚ್.ಬಿ.ಚಿದಂಬರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಹೊಸನಗರ ತಾಲೂಕಿನಲ್ಲಿ ಸುಮಾರು 29 ಸಾವಿರ ಕುಟುಂಬಗಳಿವೆ. ಒಂದೂವರೆ ಲಕ್ಷ ಜನಸಂಖ್ಯೆ ಹೊಂದಿದೆ. 2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಕ್ಷೇತ್ರ ಮರು ಹಂಚಿಕೆ ಅವೈಜ್ಞಾನಿಕವಾಗಿ ನಡೆದ ಕಾರಣಕ್ಕೆ ಕ್ಷೇತ್ರ ಕಳೆದುಕೊಳ್ಳುವಂತಾಯಿತು. ಇದರಿಂದ ಹೊಸ ನಗರ ತಾಲೂಕಿನ ಜನತೆ ರಾಜಕೀಯ ಸೇರಿದಂತೆ ಎಲ್ಲಾ ಕಾರಣಕ್ಕೆ ಉದ್ದೇಶಗಳಿಗೋಸ್ಕರ ಸಾಗರ ಹಾಗೂ ತೀರ್ಥಹಳ್ಳಿಯನ್ನು ಅವಲಂಬಿಸುವಂತಾಗಿದೆ. ಜನಸಾಮಾನ್ಯರಿಗೆ ತೀವ್ರ ಅನಾನುಕೂಲವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಾನೂನು ಹಾಗೂ ಸಂಸದೀಯ ಸಚಿವಾಲಯ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. 2008ಕ್ಕೂ ಪೂರ್ವದಲ್ಲಿದ್ದ ಮಾದರಿಯಲ್ಲಿ ಹೊಸನಗರ ತಾಲೂಕನ್ನು ಮತ್ತೊಮ್ಮೆ ವಿಧಾನಸಭಾ ಕ್ಷೇತ್ರವನ್ನಾಗಿ ಪುನರಚನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಾಡಿಗೆ ಬೆಳಕು ಕೊಟ್ಟವರ ಬದುಕು ಕತ್ತಲಿನಲ್ಲಿ!
ಹೊಸನಗರ ತಾಲೂಕು ಶರಾವತಿ ಮುಳುಗಡೆ ಪ್ರದೇಶ. ಸಾವಿರಾರು ಕುಟುಂಬಗಳು ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ಎರಡು ತಾಲೂಕುಗಳ ಮಧ್ಯದಲ್ಲಿ ಇರುವ ಹೊಸನಗರ ಅಭಿವೃದ್ಧಿಯಲ್ಲಿ ಭಾರೀ ಹಿಂದುಳಿದಿದೆ. ರಸ್ತೆ, ಸೌಲಭ್ಯ, ಪ್ರವಾಸೋದ್ಯಮ, ವಾಣಿಜ್ಯ, ಕೈಗಾರಿಕೆ, ಶಿಕ್ಷಣ, ತಂತ್ರಜ್ಞಾನ, ಮೊಬೈಲ್ ಸಂಪರ್ಕ, ಆಸ್ಪತ್ರೆ ಸೇರಿ ಎಲ್ಲಾ ಸೇವೆಯಲ್ಲಿ ಇಂದು ತಾಲೂಕು ಹಿಂದುಳಿದೆ. ಹೀಗಾಗಿ ಈಗ ಹೊಸನಗರ ತಾಲೂಕಿನ ಜನ ಹೋರಾಟಕ್ಕೆ ಸಿದ್ದವಾಗುತ್ತಿದ್ದಾರೆ.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023