ಶಾಸಕ ಬೇಳೂರು ಆಪ್ತನಿಗೆ ಜೀವ ಬೆದರಿಕೆ: ಕೇಸ್!
– ಅಕ್ರಮ ಲೇ ಔಟ್ ಮಾಫಿಯಾ ಪ್ರಶ್ನಿಸಿದ್ದಕ್ಕೆ ಬೆದರಿಕೆ
– ಸಾಗರ: ಡೆಂಟಲ್ ಕ್ಲಿನಿಕ್ ಬೀಗ ಒಡೆದು ಕಳ್ಳತನ
NAMMUR EXPRESS NEWS
ಹೊಸನಗರ: ರಿಪ್ಪನ್ಪೇಟೆ ಪಟ್ಟಣದ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಆಪ್ತ ರಮೇಶ್ (ಫ್ಯಾನ್ಸಿ ರಮೇಶ್) ತಮಗೆ ಜೀವ ಬೆದರಿಕೆ ಇದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ರಮೇಶ್ ಪಟ್ಟಣದ ಕೆಲವು ಖಾಸಗಿ ಲೇಔಟ್ ನಲ್ಲಿ ಕಾನೂನುಬಾಹಿರವಾಗಿ ಲೇಔಟ್ ನಿರ್ಮಾಣ ಮಾಡುತಿದ್ದಾರೆ ಎಂದು ಸಾಮಾಜಿಕ ಕಳಕಳಿಯಿಂದ ಈಗಾಗಲೇ ಲೇಔಟ್ ಗೆ ಸಂಬಂದಿಸಿದಂತೆ ಹಲವು ದಾಖಲೆಗಳನ್ನು ಪಡೆದುಕೊಂಡು ಬೆಂಗಳೂರಿನ ಲೋಕಾಯುಕ್ತ ಮುಖ್ಯ ಕಛೇರಿಯಲ್ಲಿ ದೂರು ದಾಖಲಿಸಿದ್ದೇನೆ. ಈ ಹಿನ್ನಲೆಯಲ್ಲಿ ಲೇಔಟ್ ಗೆ ಸಂಬಂಧಿಸಿದ ಕೆಲವು ಖಾಸಗಿ ವ್ಯಕ್ತಿಗಳು ನನಗೆ ಪದೇ ಪದೇ ಜೀವ ಬೆದರಿಕೆ ಹಾಕುತ್ತಿರುವ ಕಾರಣ ತನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿರುತ್ತಾರೆ.
ಆಸ್ಪತ್ರೆಯ ಬೀಗ ಒಡೆದು ಕಳ್ಳತನ
ಸಾಗರ: ಸಾಗರ ಪಟ್ಟಣದ ಜೋಗ ರಸ್ತೆಯ ಕಾಂಪ್ಲೆಕ್ಸ್ ನಲ್ಲಿ ಬುಧವಾರ ಕಳ್ಳತನ ನಡೆದಿರುವ ಪ್ರಕರಣ ಪತ್ತೆಯಾಗಿದೆ. ಕಾಂಪ್ಲೆಕ್ಸ್ ಅಲ್ಲಿರುವ ಅಂಬಿಕಾ ಡೆಂಟಲ್ ಕ್ಲಿನಿಕ್ನ ಬೀಗ ಒಡೆದು ಡ್ರಾನಲ್ಲಿದ್ದ 20 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ. ಬುಧವಾರ ವೈದ್ಯ ನರೇಂದ್ರ ನಾಯಕ್ ಕ್ಲಿನಿಕ್ಗೆ ಬಂದಾಗ ಕಳ್ಳತನ ನಡೆದಿರುವುದು ಪತ್ತೆಯಾಗಿದೆ. ಇದರ ಜೊತೆಗೆ ಅಕ್ಕಪಕ್ಕದಲ್ಲೂ ಸಹ ಸಣ್ಣಪುಟ್ಟ ಕಳ್ಳತನಕ್ಕೆ ಪ್ರಯತ್ನ ನಡೆದಿದೆ ಎಂದು ಮಾಹಿತಿ ತಿಳಿದು ಬಂದಿದೆ.