ನಗರದ ಶ್ರೀ ಮಾರಿಕಾಂಬ ಜಾತ್ರೆಗೆ ಇಂದು ತೆರೆ!
– ಜಾತ್ರೆಯ ಕೊನೆಯ ದಿನ ಸಾವಿರಾರು ಜನ
– ವಿಶೇಷ ಮನೋರಂಜನಾ ಕಾರ್ಯಕ್ರಮಗಳ ಸುಗ್ಗಿ
– ತಮ್ಮ ಊರಿನ ಜಾತ್ರೆಗೆ ಹೊರ ಊರಿನಿಂದ ಬಂದ ಜನ!
NAMMUR EXPRESS NEWS
ನಗರ: ನಗರದ ಮಾರಿಕಾಂಬ ಜಾತ್ರೆ ಶುರುವಾಗಿ ಇಂದಿಗೆ ಐದು ದಿನಗಳಾಗಿದ್ದು ಇದೀಗ ಜಾತ್ರೆಯ ಕೊನೆಯ ದಿನವಾಗಿದೆ. ಮೊದಲ ದಿನದಿಂದ ಜಾತ್ರೆ ವಿಜೃಂಭಣೆಯಿಂದ ನಡೆದಿದ್ದು ದೇವಸ್ಥಾನ ಹಮ್ಮಿಕೊಂಡಿದ್ದ ಎಲ್ಲ ಪೂಜಾ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ, ಅದ್ಧೂರಿಯಾಗಿ ನಡೆಸಲಾಗಿದೆ. ಜಾತ್ರಾ ಬಯಲು ಅಂಗಡಿ ಮುಂಗಟ್ಟುಗಳಿಂದ ತುಂಬಿ ಹೋಗಿದ್ದು. ಅಪಾರ ಸಂಖ್ಯೆಯಲ್ಲಿ ಭಕ್ತರ ಆಗಮನವಾಗುತ್ತಿದೆ. ಈ ವಾರಾಂತ್ಯದಲ್ಲಿ ರಜೆಗಳು ಇರುವುದರಿಂದ ದೂರದ ಊರುಗಳಲ್ಲಿ ಇರುವವರೂ ಸಹ ಜಾತ್ರೆಗೆ ಆಗಮಿಸಿ ಹರಕೆ ತೀರಿಸಿದ್ದಾರೆ.
ಹಳೆಯ ಸಂಪ್ರದಾಯ ಮುಂದುವರಿಕೆ
ನಗರದಲ್ಲಿ ಹಿಂದಿನ ಕಾಲದ ಕೋಟೆಯು ಐತಿಹಾಸಿಕ ಹಿನ್ನಲೆ ಹೊಂದಿದ್ದು ಅಲ್ಲಿಗೆ ಪ್ರವಾಸಿಗರ ಆಗಮನವೂ ಬಹಳಷ್ಟಿದೆ. ಶನಿವಾರದ ಈ ದಿನ ದೇವಿಯ ವಿಗ್ರಹವನ್ನು ಎರಡು ಕಿ.ಲೋ .ಸಮೀಪದಲ್ಲಿನ ಗಂಡನ ಮನೆಗೆ ಎತ್ತಿನ ಬಂಡಿಯ ಮೆರವಣಿಗೆಯ ಮೂಲಕ ಕೊಂಡೊಯ್ದು ನಂತರ ಅಲ್ಲಿ ಪೂಜೆ ಸಲ್ಲಿಸಿ, ನಾಲ್ಕು ಕಿಲೋ ಮಿಟರ್ ದೂರದ ಕಲಾವತಿ ನದಿಯ ಹಿನ್ನೀರಿನಲ್ಲಿ ವಿಗ್ರಹ ವಿಸರ್ಜನೆ ಮಾಡಲಾಗುತ್ತದೆ.
ವಿಶೇಷ ಮನರಂಜನೆ ಕಾರ್ಯಕ್ರಮದ ಸಂಭ್ರಮ!
ಜಾತ್ರೆಯ ಪ್ರಯುಕ್ತ ವಿಶೇಷ ಮನರಂಜನೆ ಕಾರ್ಯಕ್ರಮಗಳೂ ನಡೆದಿದ್ದು. ಜ.23 ರ ಮಂಗಳವಾರ ರಾತ್ರಿ 10 ರಿಂದ ಬತ್ತದ ಗದ್ದೆ ಮೈದಾನದಲ್ಲಿ ಕೃಷ್ಣ ಅರ್ಜುನ ಯಕ್ಷಗಾನ ನಡೆಯಿತು. ಜ.24 ರ ಬುಧವಾರ ರಾತ್ರಿ ಹತ್ತರಿಂದ ಮಲೆನಾಡಿನಲ್ಲಿ ಪ್ರಪ್ರಥಮ ಬಾರಿಗೆ ಶ್ರೀರಾಮ್ ಬಳಗ ಪುತ್ತೂರು, ಶ್ರೀಜಿತ್ ಸರಳಾಯ ಹಾಗೂ ಧನುಷ್ ಇವರಿಂದ ಕಾರ್ಯಕ್ರಮ ನಡೆದಿದೆ. ಜ.25 ರ ಗುರುವಾರ ರಾತ್ರಿ 10 ರಿಂದ ಮನೆ ಒಕ್ಲ್ ಎಂಬ ನಾಟಕ ನಡೆದಿದ್ದು ನೆರೆದವರ ಮನರಂಜಿಸಿತ್ತು. ಜ.26ರ ಶುಕ್ರವಾರ ಲೈವ್ ಮ್ಯೂಸಿಕ್ ನೈಟ್ ಆರ್ಕೆಸ್ಟ್ರಾದ ರಂಗು ಮುದ ನೀಡಿತ್ತು. ಜಾತ್ರೆ ಇದೀಗ ಕೊನೆಯ ಹಂತದಲ್ಲಿದೆ. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಜನ ದೇವಿಯ ಆಶೀರ್ವಾದ ಪಡೆದಿದ್ದಾರೆ.