ಬಿಎಸ್ ಎನ್ ಎಲ್ ನೆಟ್ವರ್ಕ್ ಇಲ್ಲ: ಟವರ್ ಏರಿದ ಜನ!
– ಹೊಸನಗರದಲ್ಲಿ ಗ್ರಾಹಕರ ವಿನೂತನ ಪ್ರತಿಭಟನೆ
– ಜೀವ ಹೋದ್ರು ಕೆಲವೆಡೆ ನೆಟ್ವರ್ಕ್ ಇಲ್ಲ: ಸಂಸದರ ಭರವಸೆ ಏನಾಯ್ತು?
NAMMUR EXPRESS NEWS
ಹೊಸನಗರ : ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಆಕ್ರೋಶಗೊಂಡ ಗ್ರಾಮಸ್ಥರು ಟವರ್ ಏರಿ ಪ್ರತಿಭಟನೆ ನಡೆಸಿದ ಘಟನೆ ಹೊಸನಗರ ತಾಲೂಕಿನ ಮತ್ತಿನಮನೆಯಲ್ಲಿ ನಡೆದಿದ್ದು ಇದೀಗ ಹೊಸನಗರ ತಾಲೂಕಿನ ವಿವಿಧ ಭಾಗದ ಜನ ಕೂಡ ಹೋರಾಟಕ್ಕೆ ಮುಂದಾಗಿದ್ದಾರೆ. ಹೊಸನಗರ ತಾಲೂಕಿನ ಮತ್ತಿಮನೆ ಗ್ರಾಪಂ ಹಿಂಭಾಗದ ಬಿಎಸ್ ಎನ್ ಎಲ್ ಟವರ್ ಸಮೀಪದಲ್ಲಿ ಜಮಾಯಿಸಿದ ಗ್ರಾಮಸ್ಥರು ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ, ಬ್ಲಾಕ್ ಕಾರ್ಯದರ್ಶಿ ಕುಮಾರ್ ಹಿಲ್ಕುಂಜಿ, ಅಡಗೋಡಿ ಸ್ವಾಮಿ, ತರುವೆ ಕೃಷ್ಣ ಮತ್ತು ಇತರರು ಟವರ್ ಏರಿ ಅಲ್ಲೇ ಕುಳಿತು ಪ್ರತಿಭಟಿಸಿದರು.
ಟವರ್ ಏರಿ ಕುಳಿತ ಗ್ರಾಮಸ್ಥರು!
ಸಮಸ್ಯೆ ಬಗೆಹರಿಯುವ ತನಕ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟುಹಿಡಿದ ಘಟನೆ ನಡೆದಿದೆ. ಸಾಕಷ್ಟು ವರ್ಷಗಳಿಂದ ಮೊಬೈಲ್ ಟವರ್ ಇದ್ದರು ನೆಟ್ವರ್ಕ್ ಸಮಸ್ಯೆ ಬಾಧಿಸುತ್ತಿದೆ. ವಿದ್ಯುತ್ ಹೋಗುತ್ತಿದ್ದಂತೆ ನೆಟ್ವರ್ಕ್ ಸಮಸ್ಯೆ ಎದುರಾಗುತ್ತಿದೆ. ಜನರೇಟರ್ ಕೆಟ್ಟು ಹೋಗಿದ್ದರು ದುರಸ್ಥಿ ಇಲ್ಲ ಅಧಿಕಾರಿಗಳಿಗೆ ಮನವಿ ಮಾಡಿದರೆ ಯಾವುದೇ ಉಪಯೋಗವಿಲ್ಲ. ನಿರ್ವಹಣೆಯನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. ಆದರೆ ಅವರು ಟವರ್ ಹತ್ತಿರ ಬರೋದೇ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು :
ಪ್ರತಿಭಟನೆ ವಿಷಯ ತಿಳಿದ ಬಿಎಸ್ಎನ್ಎಲ್ ಜೆಟಿಒ ಹರೀಶ್, ಸಂತೋಷ್, ಶರತ್, ನಗರ ಠಾಣೆ ಪಿಎಸ್ಐ ರಮೇಶ್ ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದರು. ಈ ವೇಳೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಗ್ರಾಮಸ್ಥರು ಆರೋಪಗಳ ಸುರಿಮಳೆಗೈದರು. ನಗರ ಠಾಣೆ ಪಿಎಸ್ಐ ರಮೇಶ್ ಗ್ರಾಮಸ್ಥರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.
6 ದಿನ ಕಾಲಾವಕಾಶ ಕೇಳಿದ ಅಧಿಕಾರಿಗಳು!
ಮೊಬೈಲ್ ನೆಟ್ವರ್ಕ್ 24 ಗಂಟೆಯೂ ಸಿಗಬೇಕು. ವಿದ್ಯುತ್ ಇಲ್ಲದಿದ್ದರು ಜನರೇಟರ್ ಮೂಲಕ ನೆಟ್ವರ್ಕ್ ಇರುವಂತೆ ಕ್ರಮ ಕೈಗೊಳ್ಳಲು ಪಟ್ಟುಹಿಡಿದರು. ಇದಕ್ಕೆ ಅಧಿಕಾರಿಗಳು 6 ದಿನದ ಕಾಲಾವಕಾಶ ಕೋರಿದರು. ಇದಕ್ಕೆ ಸಮ್ಮತಿಸಿದ ಗ್ರಾಮಸ್ಥರು ಟವರ್ನಿಂದ ಕೆಳಗಿಳಿದು, ಒಂದು ವೇಳೆ ಮಾತು ತಪ್ಪಿದರೆ ಮತ್ತೆ ಪ್ರತಿಭಟನಾ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಅರಮನೆಕೊಪ್ಪ ಗೋಪಾಲ್, ಕೊಡಸೆ ಚಂದ್ರಪ್ಪ, ಅಪ್ಪುಭಟ್, ಹಿಲ್ಕುಂಜಿ ಕುಮಾರ್, ಕಿಶೋರ್, ಸುಕೇಶ್ ಮತ್ತಿಕೈ, ಟಿ.ಡಿ ಗಣಪತಿ, ತರುವೆ ಕೃಷ್ಣ, ಸ್ವಾಮಿ ಅಡಗೋಡಿ, ರವೀಂದ್ರ ಮತ್ತಿಮನೆ, ಪ್ರಶಾಂತ ಸಂಪೇಕಟ್ಟೆ, ವೆಂಕಟರಮಣ ಭಟ್, ಶ್ರೀನಿವಾಸ ಎಸ್, ಆಧಿತ್ಯ, ಇತರರು ಇದ್ದರು.