ಹೊಸನಗರ ತಾಲೂಕಿನಲ್ಲಿ ಮಳೆಗೆ ಜನ ಪರದಾಟ!
– ಚಲಿಸುತ್ತಿದ್ದ ಸರ್ಕಾರಿ ಬಸ್ ಮೇಲೆ ಉರುಳಿದ ವಿದ್ಯುತ್ ಕಂಬ
– ಗೌರಿಕೆರೆ- ಕಟ್ಟಿನಹೊಳೆ ಮಾರ್ಗದಲ್ಲಿ ಭೂಕುಸಿತ
– ಕೃಷಿ ಜಮೀನಿಗೆ ನುಗ್ಗಿದ ಮಳೆ ನೀರು: ಕಂಗಾಲಾದ ರೈತ
NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಅನಾಹುತಗಳು ನಡೆಯುತ್ತಿವೆ. ಇಂದು ಬೆಳಗ್ಗೆ ಚಲಿಸುತ್ತಿದ್ದ ಸರ್ಕಾರಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದ ಘಟನೆ ೩ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೇಕಟ್ಟೆ – ನಿಟ್ಟೂರು ಮಾರ್ಗದಲ್ಲಿ ನಡೆದಿದೆ. ಬಸ್ನ ಹಿಂಬದಿಯ ಒಂದು ಬದಿಗೆ ವಿದ್ಯುತ್ ಕಂಬ ತಂತಿ ಸಮೇತ ಬಿದ್ದಿದ್ದು ಅದೃಷ್ಟವಶಾತ್ ಈ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಬಸ್ ಬೆಂಗಳೂರಿನಿಂದ ಹೊಸನಗರ – ನಗರ ಮಾರ್ಗವಾಗಿ ಕೊಲ್ಲೂರು ಕಡೆ ಚಲಿಸುತ್ತಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬ ತೆರವುಗೊಳಿಸಿ ಸಂಚಾರ ಅನುವುಮಾಡಿಕೊಟ್ಟರು.
ಹೊಸನಗರ: ಗೌರಿಕೆರೆ- ಕಟ್ಟಿನಹೊಳೆ ಮಾರ್ಗದಲ್ಲಿ ಭೂಕುಸಿತ
ಹೊಸನಗರ: ತಾಲ್ಲೂಕಿನ ನಗರ ಹೋಬಳಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇಲ್ಲಿನ ಕೊಡಚಾದ್ರಿ ಗಿರಿಗೆ ತೆರಳುವ ಗೌರಿಕೆರೆ-ಕಟ್ಟಿನಹೊಳೆ ಮಾರ್ಗದ ಲೋಕೋಪಯೋಗಿ ರಸ್ತೆ ಪಕ್ಕದಲ್ಲಿ ಭೂಕುಸಿತ ಉಂಟಾಗಿದೆ. ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೋಡಿ ಗ್ರಾಮದ ಹಾಲ್ಮನೆಯ ರಸ್ತೆ ಮಳೆಯಿಂದಾಗಿ ಹಾನಿಗೊಂಡಿದೆ. ನಾಗೋಡಿ ಗ್ರಾಮದ ಹಾಲ್ಮನೆ ಸಿದ್ದನಾಯ್ಕರ ಮನೆಗೆ ಹೋಗುವ ರಸ್ತೆ ಕುಸಿದು ಹಾನಿಯಾಗಿದೆ. ಸಿದ್ದನಾಯ್ಕ ಅವರ ಮನೆಯಿಂದ ನೀಲಮ್ಮ ಪದ್ಮನಾಯ್ಕ ಅವರ ಮನೆಗೆ ಹೋಗುವ ರಸ್ತೆಯ ಪಕ್ಕದ ಮಣ್ಣು ಕುಸಿದಿದೆ. ಗುರುಟೆಯಿಂದ ಸಂಪದ ಮನೆವರೆಗಿನ ರಸ್ತೆ ಮಳೆಯಿಂದಾಗಿ ಹಾನಿಯಾಗಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಶೆಟ್ಟಿ ಉಪಾಧ್ಯಕ್ಷೆ ವಿನೋದ ಗುರುಮೂರ್ತಿ, ಸದಸ್ಯ ಚಂದಯ್ಯ ಜೈನ್, ಪಿಡಿಒ ಪವನ್ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕೃಷಿ ಜಮೀನಿಗೆ ನುಗ್ಗಿದ ಮಳೆ ನೀರು: ಕಂಗಾಲಾದ ರೈತ
ಹೊಸನಗರ: ಇತ್ತೀಚೆಗೆ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಅನೇಕ ಹಾನಿ ಸಂಭವಿಸಿದೆ. ಪಟ್ಟಣದ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಲೇಔಟ್ ಗೆ ಅಂಟಿಕೊಂಡಿರುವ ಧರೆ ಕುಸಿಯುವ ಭೀತಿ ಎದುರಾಗಿದ್ದು, ಮಳೆ ಹೀಗೆ ಮುಂದುವರೆದಲ್ಲಿ ಹತ್ತಾರು ಎಕರೆ ಅಡಿಕೆ, ಭತ್ತದ ಗದ್ದೆಗಳಿಗೆ ವ್ಯಾಪಕ ಹಾನಿ ಉಂಟಾಗುವ ಆತಂಕ ರೈತರನ್ನು ಬೆಂಬಿಡದೆ ಕಾಡುತ್ತಿದೆ. ಪಟ್ಟಣದ ಮಾರಿಗುಡ್ಡ, ಕೈಗಾರಿಕಾ ವಲಯ, ಎಪಿಎಂಸಿ, ಕೋರ್ಟ್ ಹಿಂಭಾಗ ಸೇರಿದಂತೆ ಹಲವೆಡೆ ಸುರಿದ ಮಳೆನೀರು ಮಾವಿನ ಕೊಪ್ಪ ಗ್ರಾಮದ ರತ್ನಾಕರ ಬಿನ್ ಹಿರಿಯಣ್ಣಯ್ಯ ಎಂಬವರ (ಸರ್ವೆ ನಂಬರ್ 18) ಕೃಷಿ ಜಮೀನಿನಲ್ಲಿರುವ ಹಳ್ಳದ ಮೂಲಕ ಹಾದು ಹೋಗುತ್ತಿದೆ. ಆದರೆ ಭಾರೀ ಮಳೆಯ ಹಿನ್ನಲೆ ನೀರು ಹೆಚ್ಚಾಗಿ ಹರಿದು ಬರುತ್ತಿರುವ ಕಾರಣ, ಜಮೀನಿನ ದಂಡೆ ಒಡೆದು ನೀರು ಕೃಷಿಭೂಮಿಗೆ ನುಗ್ಗಿ ಹಾನಿ ಉಂಟಾಗಿದೆ. ಕೆ ಎಸ್ ಎಸ್ ಎಸ್ ಡಿ ಸಿ ಎಲ್ ಅವರ ಲೇಔಟ್ ನಲ್ಲಿ ಮಳೆನೀರು ಸರಾಗವಾಗಿ ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಎಲ್ಲಾ ಪ್ರಮಾಧಗಳಿಗೆ ಕಾರಣವಾಗಿದೆ ಎಂಬುದು ಕೃಷಿಕರ ದೂರಾಗಿದೆ. ಸಂಭವನೀಯ ಹೆಚ್ಚಿನ ಅವಘಡ ತಪ್ಪಿಸಲು ಸಂಬಂದ ಪಟ್ಟ ಇಲಾಖೆ ಅಧಿಕಾರಿ ವರ್ಗ ಸ್ಥಳಕ್ಕೆ ಭೇಟಿ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ರೈತ ರತ್ನಾಕರ್ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.