ಹೊಸನಗರ, ಸಾಗರದ ಇಬ್ಬರು ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ!
– ಹೊಸನಗರ ಮಾದಾಪುರ ಶಾಲೆಯ ಫೌಜಿಯಾ ಸರವತ್, ಸಾಗರದ ತ್ಯಾಗರ್ತಿ ಹೈಸ್ಕೂಲಿನ ವಿಜಯಾನಂದ ರಾವ್ ಅವರಿಗೆ ಪ್ರಶಸ್ತಿ
NAMMUR EXPRESS NEWS
ಹೊಸನಗರ/ಸಾಗರ: ಶಿವಮೊಗ್ಗ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಈ ಸಲದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭ್ಯವಾಗಿದೆ. ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ಸಾಗರ ತಾಲೂಕು ತ್ಯಾಗರ್ತಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ವಿಜಯಾನಂದ ರಾವ್ ಮತ್ತು ಹೊಸನಗರ ತಾಲೂಕು ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಫೌಜಿಯಾ ಸರವತ್ ಲಭಿಸಿದೆ. ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಹಿನ್ನೆಯಲ್ಲಿಈ ಪ್ರಶಸ್ತಿ ನೀಡಲಾಗುತ್ತದೆ.
ವಿಜ್ಞಾನ ಮಾಷ್ಟ್ರು ವಿಜಯಾನಂದ ಸಾಧನೆ
ವಿಜಯಾನಂದ ರಾವ್ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಕೆಲಸ ಮಾಡಿದವರು. ಅಲ್ಲಿಂದ ಹೊಸನಗರ ತಾಲೂಕಿನ ಕಾರಣಗಿರಿಗೆ ಬಂದು 8 ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ತ್ಯಾಗರ್ತಿಯಲ್ಲಿ ಕಳೆದ 12 ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ವಿಜೂಸ್ ಕ್ಲಾಸಸ್ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೆ ಅದರ ಮೂಲಕ ಮಕ್ಕಳಿಗೆ ಆನ್ಲೈನ್ ಕ್ಲಾಸ್ ತೆಗೆದುಕೊಳ್ತಿದ್ದಾರೆ. ಮೇಲಾಗಿ ಯೂಟ್ಯೂಬ್ ಚಾನಲ್ ಮೂಲಕ ಆಧುನಿಕ ವಿಜ್ಞಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ತರಬೇತಿ ಕ್ಲಾಸ್ ತೆಗೆದುಕೊಂಡಿದ್ಧಾರೆ.
ಫೌಜಿಯಾ ಮಕ್ಕಳ ಮೆಚ್ಚಿನ ಟೀಚರ್!
ಹೊಸನಗರ ತಾಲೂಕು ಅರಸಾಳು ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿ ಮುಸ್ಲಿಂ ಯುವತಿ ಫೌಜಿಯ ಸರವತ್ ಈ ಬಾರಿಯ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ಯಾರಜಾನ್ ಹಾಗೂ ಕೌಸರ್ ಫಾತಿಮಾ ದಂಪತಿಗಳ ಪುತ್ರಿ ಪೌಜಿಯ 2007 ರಿಂದ 2016 ರ ವರೆಗೂ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮೇಲುಕೊಪ್ಪದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
2016ರಿಂದ 2022 ರ ವರೆಗೂ ತೀರ್ಥಹಳ್ಳಿ ತಾಲೂಕು ಕಲ್ಲು ಗುಡ್ಡ ಪ್ರಾಥಮಿಕ ಶಾಲೆಯಲ್ಲಿ ಹಾಗೂ 2022 ರಿಂದ ಹೊಸನಗರ ತಾಲೂಕು ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಫೌಜಿಯಾ ಸರವತ್ ಮಕ್ಕಳಿಗೆ ಸ್ಮಾರ್ಟ್ಕ್ಲಾಸ್ ಮೂಲಕ ಹಲವು ಕಾರ್ಯಕ್ರಮ ನೀಡಿದ್ದಾರೆ. ದಾನಿಗಳ ಮೂಲಕ ವಿದ್ಯಾರ್ಥಿಗಳಿಗೆ, ಶಾಲೆಗೆ ಅನೇಕ ಸಾಮಗ್ರಿ ಕೊಡಿಸಿದ್ದಾರೆ. ಯೂಟ್ಯೂಬ್ ಚಾನಲ್ ಮೂಲಕ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಿದ್ದಾರೆ. ಅಲ್ಲದೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ, ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.