ಚುನಾವಣಾ ಬಹಿಷ್ಕಾರ ಮಾಡಿದ ಮಾಗಲು ಗ್ರಾಮದ ಜನತೆ!
– ವರಾಹಿ ಹಿನ್ನೀರಿನ ಗ್ರಾಮಕ್ಕೆ ರಸ್ತೆ ಇಲ್ಲ..ಮೂಲಭೂತ ಸೌಲಭ್ಯ ಇಲ್ಲವೇ ಇಲ್ಲ
– ಪ್ರಧಾನಿ ಮೋದಿ ಪತ್ರಕ್ಕೂ ಬೆಲೆ ಕೊಡದ ಆಡಳಿತ?!
– ರಸ್ತೆ ಇಲ್ಲದೆ ಮಳೆಗಾಲದಲ್ಲಿ ಜೀವ ಭಯ!
ವಿಶೇಷ ವರದಿ
NAMMUR EXPRESS NEWS
ಹೊಸನಗರ: ಮೂಲ ಭೂತ ಸೌಲಭ್ಯದಿಂದ ವಂಚಿತರಾದ ಗ್ರಾಮಸ್ತರು ಈಗ ಮುಂಬರುವ ಲೋಕ ಸಭಾ ಚುನಾವಣೆ ಬಹಿಷ್ಕಾರಕ್ಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಮಾಗಲು ಗ್ರಾಮದ ಜನ ಮುಂದಾಗಿದ್ದಾರೆ.
ಇಡೀ ರಾಜ್ಯಕ್ಕೆ ಬೆಳಕು ಕೊಡಲು ತಮ್ಮ ಬದುಕನ್ನೇ ಕಳೆದುಕೊಂಡ ವರಾಹಿ ಹಿನ್ನೀರಿನಲ್ಲಿ ಬರುವ ಗ್ರಾಮ ಇದಾಗಿದ್ದು ಸುಮಾರು 20 ಕುಟುಂಬಗಳು ವಾಸಿಸುತ್ತಿವೆ, ಆದರೆ ಈ ಕುಟುಂಬಗಳ ಪರಿಸ್ಥಿತಿ ತೀರಾ ಕಷ್ಟಕರವಾಗಿದೆ. ಮೂಲಭೂತ ಸೌಕರ್ಯವಿಲ್ಲದೆ ಈಗಗಾಗಲೆ 4 ಕುಟುಂಬಗಳು ವಲಸೆ ಹೋಗಿವೆ. ಸುಮಾರು 50 ವರ್ಷದಿಂದ ರಸ್ತೆಗಾಗಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಜನ ಇದೀಗ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಬ್ಯಾನರ್ ಹಾಕಿ ಜಿಲ್ಲಾ ಮತ್ತು ತಾಲೂಕು ಆಡಳಿತವನ್ನು ಎಚ್ಚರಿಸಿದ್ದಾರೆ.
ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನ ಆಗಿಲ್ಲ!
ಮಳೆಗಾಲದ ಸನ್ನಿವೇಶದಲ್ಲಿ ಯಾವುದೇ ವಾಹನಗಳು ಬರಲಾಗದ ಪರಿಸ್ಥಿತಿ ಊರಿನದ್ದು,ಕಳೆದ 50 ವರ್ಷಗಳಲ್ಲಿ ಆಶ್ವಾಸನೆಗಳಿಂದ ಜನರಿಂದ ಮತವನ್ನು ಕೇಳಿರುವುದು ಬಿಟ್ಟರೆ ,ಹೇಳಿ ಕೊಳ್ಳುವುದಕ್ಕೂ ಯಾವುದೇ ಅಭಿವೃದ್ಧಿ ಆಗಿಲ್ಲ. ವಯಸ್ಕರು ಅಸ್ಪತೆಗೆ ಹೋಗಬೇಕಾದರೆ ಅಥವಾ ಮಕ್ಕಳು ಶಾಲೆಗಳಿಗೆ ಹೋಗವರಿಗೆ ತುಂಬಾ ಕಷ್ಟದ ಪರಿಸ್ಥಿತಿ ಈ ಊರಿನದ್ದು, ಈ ಸಮಸ್ಯೆಗಳನ್ನು ಪ್ರಧಾಮಂತ್ರಿವರೆಗೂ ಪತ್ರ ಬರೆದು ಅವರ ಗಮನಕ್ಕೆ ತಂದಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸ್ಥಳೀಯ ಎಂಜಿನಿಯರ್ ( ಕಾರ್ಯಪಾಲಕ ಎಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಸಾಗರ) ಇವರುಗಳು ನಕಲಿ ಎಸ್ತಿಮೇಷನ್ ಸೃಷ್ಟಿಸಿ ಅನಾವಶ್ಯಕವಾಗಿ 2 ಕೋಟಿ ಎಸ್ತೀಮೇಷನ್ ತೋರಿಸಿರುತ್ತಾರೆ. ಇದೆ ಎಂಜಿನಿಯರ್ ಸ್ಥಳ ಪರಿಶೀಲನೆಗೆ ಬಾರದೆ ಗ್ರಾಮಸ್ಥರ ಗಮನಕ್ಕೂ ತರದೆ ಮೋದಿ ಅವರ ಪತ್ರಕ್ಕೆ ಫೇಕ್ ಎಸ್ಟಿಮೇಷನ್ ನೀಡಿರುತ್ತಾರೆ ಎಂದು ಗ್ರಾಮಸ್ತರು ಆರೋಪಿಸಿದ್ದಾರೆ. ಆದ್ದರಿಂದ ಈ ಬಾರಿ ಆಶ್ವಾಸನೆ ಗಳಿಗೆ ಬೇಸತ್ತು ಮಾಗಲು ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಓಡಾಡಲು ಜೀವ ಭಯ!
ರಾಜಕೀಯ ಪ್ರಮುಖರು ಮತ ಕೇಳುವುದಕ್ಕೆ ಬರುವಾದರೆ ದಯವಿಟ್ಟು ಬರಲೇಬೇಡಿ…ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿ ಅಭಿವೃದ್ಧಿಯೊಂದಿಗೆ ಬನ್ನಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಈ ಗ್ರಾಮಕ್ಕೆ ಸುಮಾರು 2.5 ಕಿಮೀ ರಸ್ತೆಯ ಅವಶ್ಯಕತೆ ಇದೆ, ಪ್ರತಿವರ್ಷ ಗ್ರಾಮಸ್ಥರೇ ಸೇರಿ ರಸ್ತೆಗೆ ಮಣ್ಣು ತುಂಬಿಸಿ ರಸ್ತೆ ಮಾಡಿಕೊಂಡರು ಸುರಿಯುವ ಮಳೆಯಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಬರಿ ಕಲ್ಲುಗಳು ರಸ್ತೆಯ ಮೇಲೆ ಉಳಿಯುತ್ತದೆ, ಆ ರಸ್ತೆಯಲ್ಲಿ ವಾಹನವಿರಲಿ ಕಾಲ್ನಡಿಗೆಯಲ್ಲಿ ಕೂಡ ಚಲಿಸಲು ಈ ರಸ್ತೆ ಯೋಗ್ಯವಾಗಿಲ್ಲ. ಮಳೆಗಾಲದಲ್ಲಿ ಸಂಪೂರ್ಣ ರಸ್ತೆ ಜಖಂಗೊಂಡು ವಾಹನಗಳು ಯಾವುದು ಬರುವುದಿಲ್ಲ , ಈ ಎಲ್ಲಾ ವಿಷಯಗಳು ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರಿಗೂ ತಿಳಿದಿದ್ದರೂ ಅದರಿಂದ ಯಾವುದೇ ಉಪಯೋಗಗಳು ಆಗಿಲ್ಲ. ಆದ್ದರಿಂದ ಇಷ್ಟು ವರ್ಷಗಳು ಮತ ನೀಡಿಯೂ ಕೂಡ ಯಾವುದೇ ಮೂಲಭೂತ ಸೌಕರ್ಯಗಳು ಸಿಕ್ಕಿರುವುದಿಲ್ಲ. ಅದಕ್ಕಾಗಿ ಮಾಗಲಿನ 43 ಜನರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿರುತ್ತಾರೆ.
ಜವಾಬ್ದಾರಿ ಮರೆಯಿತೇ ಕೆಪಿಸಿ?
ವಿಪರ್ಯಾಸವೆಂದರೆ ವರಾಹಿ ಹಿನ್ನೀರಿಗೆ ಡ್ಯಾಂ ನಿರ್ಮಾಣಕ್ಕೆ ಕಲ್ಲನ್ನು ಇದೇ ಮಾಗಲಿನಿಂದ ಸಾಗಿಸಿಕೊಂಡಿದ್ದಾರೆ. ಆದ್ರೆ ಅದೇ ಕೆಪಿಸಿ ಅವರ ಕಡೆಯಿಂದಲೂ ನಮಗೆ ರಸ್ತೆ ಮಾಡಿಕೊಡದಿರುವುದು ಇವರ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ…ಹಲವು ಬಾರಿ KPC ಎಂಜಿನಿಯರ ಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಆದ್ದರಿಂದ ಎಲ್ಲಾ ಗ್ರಾಮಸ್ಥರು ಬೇಸತ್ತು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.