ಜನರ ಕಾಯುವ ಪೊಲೀಸರಿಗೆ ಭದ್ರತೆ ಇಲ್ಲ!
– ಪೋಲೀಸರ ಮನೆಗೆ ಟಾರ್ಪಲ್ ಹೊದಿಕೆ
– ಹೊಸನಗರದ ರಿಪ್ಪನ್ ಪೇಟೆ ಪಟ್ಟಣದಲ್ಲಿ ಅವ್ಯವಸ್ಥೆ
– ಕೇಳಿ ಸ್ವಾಮಿ ಪೊಲೀಸರ ಗೋಳು!
NAMMUR EXPRESS
ಹೊಸನಗರ: ಜನರನ್ನು ಕಾಯುವ ಪೊಲೀಸರಿಗೆ ರಕ್ಷಣೆ ಇಲ್ಲ. 20 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಪೊಲೀಸ್ ಕ್ವಾಟ್ರಸ್ ಈಗ ಮಳೆಗೆ ಸೋರುತ್ತಿದೆ. ಪೊಲೀಸ್ ಕುಟುಂಬಗಳು ಈ ವಸತಿ ಗೃಹದಲ್ಲಿ ಇರಲಾಗದೆ ಟಾರ್ಪಲ್ ಹಾಕಲಾಗಿದೆ. ಇದು ಇಡೀ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಹೌದು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಕಳೆದ 20 ವರ್ಷಗಳ ಹಿಂದೆ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಪೊಲೀಸ್ ಇಲಾಖೆಯ ವಸತಿಗೃಹಗಳನ್ನು ನಿರ್ಮಾಣ ಮಾಡಲಾಗಿತ್ತು, ಈ ವಸತಿ ಗೃಹಗಳಲ್ಲಿ ಸುಮಾರು 20ಕ್ಕಿಂತಲೂ ಹೆಚ್ಚು ಕೊಠಡಿಗಳು ನಿರ್ಮಾಣವಾಗಿದ್ದು ಎಲ್ಲವೂ ಕೂಡ ಶಿಥಿಲಾವಸ್ಥೆ ತಲುಪಿವೆ, ಅದಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರವ ಈ ವಸತಿಗೃಹ ಗಳ ರಸ್ತೆ,ಕುಡಿಯುವ ನೀರು, ಶೌಚಾಲಯ,ಚರಂಡಿ ನಿರ್ವಹಣೆ ಹಾಗೂ ಬೀದಿ ದೀಪಗಳ ನಿರ್ವಹಣೆ ಮತ್ತು ಸ್ವಚ್ಛತೆ ಬಗ್ಗೆ ಕೂಡ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
2003ರಲ್ಲಿ ಅಂದಿನ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಜಿ ಡಿ ನಾರಾಯಣಪ್ಪ ಅಧಿಕಾರದ ಅವಧಿ ಹಾಗೂ ಅಧ್ಯಕ್ಷತೆಯಲ್ಲಿ ನೂತನ ಪೊಲೀಸ್ ವಸತಿಗೃಹಗಳ ಉದ್ಘಾಟನಾ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತ್ತು. ಈ ಕಾರ್ಯಕ್ರಮಕ್ಕೆ ಅಂದಿನ ಐಜಿಪಿ ಹಯತ್ ಜಿ ಎಂ ದಾವಣಗೆರೆ ಇವರು ಉದ್ಘಾಟಿಸಿದ್ದರು. ಆದರೆ ಅದ್ದೂರಿಯಾಗಿ ಉದ್ಘಾಟನೆಗೊಂಡ ಕೇವಲ ಐದು ವರ್ಷಗಳಲ್ಲಿ ನೂತನ ಪೊಲೀಸ್ ವಸತಿಗೃಹಗಳ ನಿಜ ಬಣ್ಣ ಬಯಲಾಗಿದೆ. ಸಣ್ಣ ಸಣ್ಣದಾಗಿ ಸೋರಲು ಶುರುವಾದ ಮೇಲ್ಚಾವಣಿಯು ಈಗ ಸಂಪೂರ್ಣ ಬಿರುಕು ಬಿಟ್ಟಿವೆ. ಎಲ್ಲೆಂದರಲ್ಲಿ ಮಳೆ ನೀರು ಸೋರುತ್ತಿದೆ.
ಟಾರ್ಪಲ್ ಮುಚ್ಚಿಕೊಂಡು ವಾಸ
ಕಳೆದ 15 ವರ್ಷಗಳಿಂದ ಈ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ಪೊಲೀಸರು ಅನಿವಾರ್ಯವಾಗಿ ಟಾರ್ಪಲ್ ಮುಚ್ಚಿಕೊಂಡು ವಾಸವಿರಬೇಕಾದ ಪರಿಸ್ಥಿತಿ ಬಂದೊದಗಿದೆ.ಅಂದಿನ ಇಂಜಿನಿಯರ್ ರವರ ನಿರ್ಲಕ್ಷದ ನೀಲಾನಕ್ಷೆ ತಯಾರಿಸಿದ್ದು, 22 ವಸತಿ ಗೃಹಗಳ 22 ಶೌಚಾಲಯಕ್ಕೆ ಒಂದೇ ಸಂಪರ್ಕ ಕಲ್ಪಿಸಿದೆ. ಪೈಪ್ ಬ್ಲಾಕ್ ಆದರೆ ಅಥವಾ ಒಡೆದರೆ ದುರ್ನಾಥ ದಿಂದ 22 ಪೊಲೀಸ್ ಕುಟುಂಬಗಳು ನರಕ ಯಾತನೆ ಅನುಭವಿಸಬೇಕಾಗುತ್ತದೆ.
ಜನರ ಕಾಯುವ ಪೊಲೀಸರಿಗೂ ನೆಮ್ಮದಿ ಇಲ್ಲ!
ಮಳೆ, ಬಿಸಿಲು,ಚಳಿ, ಹಗಲು ರಾತ್ರಿ ಎನ್ನದೆ ಸಾರ್ವಜನಿಕರ, ಅಧಿಕಾರಿಗಳ,ರಾಜಕೀಯ ವ್ಯಕ್ತಿಗಳ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ನಿರಂತರ ಒಂದಿಲ್ಲೊಂದು ತಲೆನೋವು ಇದ್ದೇ ಇರುತ್ತದೆ, ಬಂದೋಬಸ್ತ್ , ವಾಹನ ದಟ್ಟಣೆ,ಕೆಲಸದ ಒತ್ತಡ ಹೀಗೆ ನೂರೆಂಟು ಗೌಜುಗಳನ್ನ ಮುಗಿಸಿಕೊಂಡು ಮನೆಗೆ ಹೋದರೆ ಅಲ್ಲಿಯೂ ನೂರೆಂಟು ಸಮಸ್ಯೆ, ಸೋರುತ್ತಿರುವ ಮನೆ, ಕುಡಿಯಲು ಶುದ್ಧ ನೀರಿಲ್ಲ, ಇರುವ ಒಂದು ಬಾವಿಯಲ್ಲಿ ಗಿಡಗಂಟಿಗಳು ಬೆಳೆದು ಪಾಳು ಬಿದ್ದಂತಿದೆ.
ವಸತಿಗೃಹದ ಸುತ್ತಲೂ ಆಳೆತ್ತರದ ಪೊದೆಗಳು ಬೆಳೆದಿದ್ದು ವಿಷ ಜಂತುಗಳ ಭಯ ಇನ್ನಷ್ಟು ಆತಂಕಕ್ಕೆ ಎಡೆ ಮಾಡಿದೆ.
ರಸ್ತೆ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಕೆಲ ಸಿಬ್ಬಂದಿಗಳು ದ್ವಿಚಕ್ರ ವಾಹನದಲ್ಲಿ ಬಿದ್ದ ಉದಾಹರಣೆಗಳು ಇವೆ. ಹದಗೆಟ್ಟ ಬೀದಿ ದೀಪಗಳ ನಿರ್ವಹಣೆ ಕೂಡ ಹೇಳತೀರದಾಗಿದೆ,ಈ ಕುರಿತು ಗ್ರಾಮ ಪಂಚಾಯಿತಿ ಕೂಡ ಗಮನಹರಿಸುತ್ತಿಲ್ಲ. ಪೊಲೀಸ್ ಸಿಬ್ಬಂದಿಗಳು ವಸತಿಗೃಹ ಸೇರಿದಂತೆ ಮೂಲಭೂತ ಸೌಕರ್ಯ ಸೌಕರ್ಯಗಳ ಸಮಸ್ಯೆ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ, ಇನ್ನಾದರೂ ಸಂಬಂಧ ಪಟ್ಟ ಗೃಹ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿಕೊಡುವರೇ ಎಂದು ಕಾದು ನೋಡಬೇಕಾಗಿದೆ.
ವಿಶೇಷ ವರದಿ: ಆರಗ ದೇವರಾಜ್ ರಿಪ್ಪನ್ ಪೇಟೆ
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023