- ಸಚಿವರಾಗಿದ್ದ ಕುಲಕರ್ಣಿಗೆ ಸಾಥ್ ನೀಡಿದ್ದ ಅಧಿಕಾರಿಗಳು….
ಹುಬ್ಬಳ್ಳಿ: ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ ಗೌಡ ಕೊಲೆ ಪ್ರಕರಣದ ತನಿಖೆ ಈಗ ಮತ್ತೊಂದ ಹಂತಕ್ಕೆ ತಲುಪಿದ್ದು, ಸಾಕ್ಷಿ ನಾಶಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಕೋಟಿ-ಕೋಟಿ ಹಣ ಸುರಿದಿದ್ದಾರೆ ಎಂಬ ಮಾಹಿತಿಯನ್ನು ಸಿಬಿಐ ಅಧಿಕಾರಿಗಳು ಕಲೆ ಹಾಕಿದ್ದಾರೆ. ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಕೆಎಎಸ್ ಅಧಿಕಾರಿ ಸೋಮಶೇಖರ ನ್ಯಾಮಗೌಡರ ವಿಚಾರಣೆಯನ್ನು ಸಿಬಿಐ ಭಾನುವಾರವೂ ಮುಂದುವರೆಸಿದೆ.
ಸಚಿವರ ಆಪ್ತರಾಗಿದ್ದರು…: ವಿನಯ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಲಿಂಗ ನ್ಯಾಮಗೌಡ, ವಿನಯ ಕುಲಕರ್ಣಿ ಸಚಿವರಾಗಿದ್ದ ವೇಳೆ ಆಪ್ತ ಕಾರ್ಯದರ್ಶಿಯಾಗಿದ್ದರು. ಸೋಮಲಿಂಗ ನ್ಯಾಮಗೌಡ ಅವರನ್ನು ಕಳೆದ ಮೂರು ದಿನಗಳಿಂದ ಸಿಬಿಐನಿಂದ ವಿಚಾರಣೆ ನಡೆಸಲಾಗಿದೆ. ವಿನಯ ಹಾಗೂ ಸೋಮಲಿಂಗ ಇಬ್ಬರನ್ನೂ ಮುಖಾಮುಖಿ ವಿಚಾರಣೆ ಮಾಡಿದ್ದ ಸಿಬಿಐ ಅಧಿಕಾರಿಗಳು ಮತ್ತೇ ವಿಚಾರಣೆಗಾಗಿ ಸಿಎಆರ್ ಮೈದಾನಕ್ಕೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.
2 ಕೋಟಿ ರೂ. ಹಣ: ಸಾಕ್ಷ ನಾಶಪಡಿಸಲು ದೊಡ್ಡ ಮಟ್ಟದ ಹಣ ನೀಡಿದ ಆರೋಪದ ಹಿನ್ನೆಲೆಯಲ್ಲಿ ನ್ಯಾಮಗೌಡ ವಿಚಾರಣೆ ನಡೆಸಲಾಗುತ್ತಿದೆ. ಒಂದೇ ದಿನ 2 ಕೋಟಿ ರೂ. ವರ್ಗಾವಣೆಯಾಗಿದ್ದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ಸದ್ಯ ನ್ಯಾಮಗೌಡ ಅವರನ್ನು ವಿಚಾರಣೆಗೊಳಪಡಿಸಲಾಗಿದ್ದು ಯಾರ್ಯಾರಿಗೆ ಹಣ ಸಂದಾಯವಾಗಿದೆ ಮತ್ತು ಯಾವ ಕಾರಣಕ್ಕೆ ದುಡ್ಡು ನೀಡಲಾಗಿತ್ತು ಎಂಬ ಮಾಹಿತಿಯನ್ನು ಸಿಬಿಐ ಕೆದಕುತ್ತಿದೆ.
ಯಾರು ಈ ಸೋಮಶೇಖರ ?: ಸೋಮಶೇಖರ ನ್ಯಾಮಗೌಡ ಕೆಎಎಸ್ ಅಧಿಕಾರಿ. ವಿನಯ ಕುಲಕರ್ಣಿಯವರ ಕಾಲೇಜು ದಿನಗಳ ಸಹಪಾಠಿಯೂ ಹೌದು. ಸದ್ಯ ಹಾವೇರಿ ಜಿಲ್ಲೆಯ ಬ್ಯಾಡಗಿ ಎಪಿಎಂಸಿ ಕಾರ್ಯದರ್ಶಿ. ಅಲ್ಲದೇ, ವಿನಯ ಸಚಿವರಾಗಿದ್ದಾಗ ಹುಬ್ಬಳ್ಳಿ ಎಪಿಎಂಸಿ ಜಂಟಿ ಕಾರ್ಯದರ್ಶಿಯಾಗಿದ್ದ ಈ ನ್ಯಾಮಗೌಡನನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ವಿನಯ ನೇಮಕ ಮಾಡಿಕೊಂಡಿದ್ದರು.
2 ಕೋಟಿ ರೂ. ಹಣದಲ್ಲಿ ರೂಮ್ ಬುಕ್ಕಿಂಗ್, ಟಿಕೆಟ್ ಬುಕ್ಕಿಂಗ್ ಯಾವೆಲ್ಲ ಕಡೆ ಹಣ ಸಾಗಣೆಯಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೇ, ಸೋಮಶೇಖರ ನ್ಯಾಮಗೌಡನ ವಾಹನ ಚಾಲಕನಾಗಿದ್ದ ಪುಂಡಲೀಕ ಮೊರಬದ ಎಂಬುವನನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜಿಪಂ ಎಇಇ ಸಹಾ ವಿಚಾರಣೆಗೆ : ಸಿಬಿಐ ತನಿಖಾಧಿಕಾರಿ ರಾಕೇಶ ರಂಜನ್ ನೇತೃತ್ವದ ತಂಡ ಧಾರವಾಡ ಜಿಪಂ ಎಇಇ ಆಗಿರುವ ಎಸ್.ಎನ್. ಗೌಡರನ್ನು ಸಹಾ ವಿಚಾರಣೆಗೊಳಪಡಿಸಿದೆ. ಈ ಎಸ್.ಎನ್. ಗೌಡರ್ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಚುನಾವಣೆ ವೇಳೆ ಫ್ಲೈಯಿಂಗ್ ಸ್ಕ್ಯಾಡ್ ಆಗಿದ್ದರು. ಚುನಾವಣೆ ವೇಳೆ ನಡೆದ ವಿಷಯಗಳ ಕುರಿತು ಮತ್ತು ಈ ಸಮಯದಲ್ಲಿ ಯೋಗೇಶಗೌಡ ವಿರುದ್ಧ ನೀತಿ ಸಂಹಿತೆ ಪ್ರಕರಣ ದಾಖಲಿಸಿದ್ದರ ಬಗ್ಗೆ, ವಿನಯ ಕುಲಕರ್ಣಿ ಒತ್ತಡದ ಹಿನ್ನೆಲೆಯನ್ನೂ ಸಿಬಿಐ ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಸಿಬಿಐ ಇನ್ನೂ ಯಾರ್ಯಾರಿಗೆ ಗಾಳ ಹಾಕುತ್ತದೆ ಎಂಬುದನ್ನು ಕಾದುನೋಡಬೇಕಿದೆ.