- ವಿತ್ತ ಸಚಿವೆ 5 ರೂ. ಹರಾಜು… ಜೋಶಿ ಬಿಕರಿಯಾಗದೇ ಉಳಿದರು..
ಹುಬ್ಬಳ್ಳಿ: ಲೋಕಸಭಾ ಸದಸ್ಯ ಒಂದು ರೂ.ಗೆ ಹರಾಜಾದರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ರಾಜ್ಯದ ಮತ್ತಿತರ ಲೋಕಸಭಾ ಸದಸ್ಯರು ಬಿಕರಿಯಾಗದೇ ಉಳಿದರು…
ಇದೇನಿದು ತಮಾಸೆ ಎಂದು ಹುಬ್ಬೇರಿಸಬೇಡಿ. ಈ ಹರಾಜು ಪ್ರಕ್ರಿಯೆ ನಡೆದಿದ್ದು ವಾಣಿಜ್ಯನಗರಿ ಹೃದಯ ಭಾಗವಾಗಿರುವ ಕಿತ್ತೂರ ಚೆನ್ನಮ್ಮ ಸರ್ಕಲ್ನಲ್ಲಿ. ಹರಾಜು ಪ್ರಕ್ರಿಯೆ ನಡೆಸಿಕೊಟ್ಟವರು ವಾಟಾಳ್ ನಾಗರಾಜ್.
ಹೌದು, ಕರ್ನಾಟಕದಿಂದ ಆಯ್ಕೆಗೊಂಡ ಲೋಕಸಭಾ ಸದಸ್ಯರಿಂದ ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ ಎಂದು ಆರೋಪಿ, ಲೋಕಸಭಾ ಸದಸ್ಯರನ್ನು ಹರಾಜು ಹಾಕುವ ಮೂಲಕ ವಾಟಾಳ್ ನಾಗರಾಜ್ ನಡೆಸಿದ ವಿನೂತನ ಪ್ರತಿಭಟನೆಯಿದು.
ಉತ್ತರ ಕರ್ನಾಟಕ ಪ್ರವಾಹ, ಅತಿವೃಷ್ಠಿ, ಅನಾವೃಷ್ಠಿಯಿಂದ ತತ್ತರಿಸಿದೆ. ಉತ್ತರ ಕರ್ನಾಟಕ ಹಾಗೂ ಸಮಸ್ತ ಕರ್ನಾಟಕವನ್ನು ಲೋಕಸಭಾ ಸದಸ್ಯರು ಅಭಿವೃದ್ಧಿಪಡಿಸುತ್ತಿಲ್ಲ ಎಂದು ಆರೋಪಿಸಿದರು. ಕರ್ನಾಟಕದಿಂದ ಆಯ್ಕೆಯಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮರನ್ನು ಒಂದು ರೂಪಾಯಿಗೆ ಹರಾಜು ಪ್ರಕ್ರಿಯೆ ಆರಂಭಿಸಿದ ವಾಟಾಳ್, ಐದು ರೂಪಾಯಿಗೆ ಎನ್.ಎಚ್. ಪಾಟೀಲ್ ಖರೀದಿಸಿದರು. ಒಂದು ರೂಪಾಯಿಗೆ ಕರಡಿ ಸಂಗಣ್ಣರನ್ನು ಬಾಲಕನೊಬ್ಬ ಖರೀದಿಸಿದ. ಹರಾಜಿನಲ್ಲಿ ಬಿಕರಿಯಾಗದ ಧಾರವಾಡದ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸದಾನಂದಗೌಡ, ಜಿ.ಎಂ. ಸಿದ್ದೇಶ್ವರ, ಅನಂತಕುಮಾರ ಹೆಗಡೆ, ಬಿ.ವೈ. ರಾಘವೇಂದ್ರ, ತೇಜಸ್ವಿ ಸೂರ್ಯ, ದೇವೇಂದ್ರಪ್ಪ, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ, ತುಮಕೂರ ಸಂಸದ ಬಸವರಾಜು, ಬಿ.ಡಿ. ನಾಯಕ, ಬಿದರ ಸಂಸದ ಭಗವಂತ ಕೂಬಾ, ಡಿ.ಕೆ. ಸುರೇಶ, ಪಿಸಿ ಗದ್ದಿಗೌಡರ, ಸುಮಲತಾ ಅಂಬರೀಶ, ಶಿವಕುಮಾರ ಉದಾಸಿ, ಪ್ರಜ್ವಲ ರೇವಣ್ಣ, ನಳೀನಕುಮಾರ್ ಕಟೀಲ್, ಪಿಸಿ ಮೋಹನ, ಬಿ.ಎನ್. ಬಚ್ಚೇಗೌಡ, ಶ್ರೀನಿವಾಸ ಪ್ರಸಾದ, ಶೋಭಾ ಕರಂದ್ಲಾಜೆ, ರಮೇಶ ಜಿಗಜಣಗಿ, ನಾರಾಯಣ ಸ್ವಾಮಿ ಇವರೆಲ್ಲ ಛಾಯಾಚಿತ್ರವನ್ನು ಹರಾಜು ಹಾಕುವುದರ ಮೂಲಕ ವಿಭಿನ್ನ ರೀತಿಯಲ್ಲಿ ವಾಟಾಳ್ ಪ್ರತಿಭಟನೆ ನಡೆಸಿದ್ದು ಗಮನ ಸೆಳೆಯಿತು. ಕರವೇ ಜಿಲ್ಲಾಧ್ಯಕ್ಷ ಅಮೃತ ಇಜಾರಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.