- ಆನ್ಲೈನ್ ಶಿಕ್ಷಣ, ಹೋಂ ವರ್ಕ್ಗೆ ವಿದ್ಯಾರ್ಥಿಗಳು ಹೈರಾಣ
- ಹೋಂ ವರ್ಕ್ ತೋರಿಸಲು 35 ಕಿಲೋ ಮೀಟರ್ ಪಯಣ
ಹುಬ್ಬಳ್ಳಿ: ಬೆಕ್ಕಿಗೆ ಚೆಲ್ಲಾಟ…ಇಲಿಗೆ ಪ್ರಾಣ ಸಂಕಟ…ಎಂಬ ಮಾತು ಕರೋನಾದಂತಹ ಸಂಕಷ್ಟ ಕಾಲದಲ್ಲಿ ಪ್ರತಿಯೊಬ್ಬ ಪಾಲಕರು ನೆನಪಿಸಿಕೊಳ್ಳುವಂತೆ ಮಾಡಿದೆ..!
ಹೌದು, ಒಂದೆಡೆ ಪ್ರಾಣ ಹೀರುವ ಕರೋನಾ ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲೇ ತನ್ನ ಅಟ್ಟಹಾಸ ಮರೆಯುತ್ತಿದೆ. ಈ ಮಧ್ಯೆ, ಶಾಲೆಗಳ ಆರಂಭಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರತಿನಿತ್ಯವೂ ಪ್ರಕಟಿಸುತ್ತಿರುವ ಮಾರ್ಗಸೂಚಿಗಳು ನಿಜಕ್ಕೂ ಪಾಲಕ ವರ್ಗವನ್ನು ಹೈರಾಣಾಗಿಸಿವೆ ಎಂದರೇ ಅತಿಶೋಕ್ತಿ ಆಗಲಿಕ್ಕಿಲ್ಲ.
35 ಕಿಲೋ ಮೀಟರ್ನಿಂದ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರೀಬೂದಿಹಾಳ ಗ್ರಾಮದ 8 ವರ್ಷದ ಬಾಲಕ ಪವನ್, ಶಿಕ್ಷಕಿ ನೀಡಿದ ಹೋಂ ವರ್ಕ್ ತೋರಿಸಲು 35 ಕಿಲೋ ಮೀಟರ್ ಪಯಣವನ್ನು ತನ್ನ ತಾಯಿಯೊಂದಿಗೆ ಕೈಗೊಂಡ ಕಥೆ ಇದು.
ವಿದ್ಯಾರ್ಥಿ ಪವನ್ ತಂದೆ-ತಾಯಿ ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಗನ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದೆಂಬ ಉದ್ದೇಶದಿಂದ ಹುಬ್ಬಳ್ಳಿಯ ವಸತಿ ನಿಲಯದಲ್ಲಿಟ್ಟು ವಿದ್ಯಾಭ್ಯಾಸ ನೀಡುತ್ತಿದ್ದರು. ಕರೋನಾ ಹಿನ್ನೆಲೆಯಲ್ಲಿ ಕಳೆದ ತಿಂಗಳು ತನ್ನ ತಾಯಿಯೊಂದಿಗೆ ಶಾಲೆಗೆ ಭೇಟಿ ನೀಡಿದ್ದ ಪವನ್, ಅದೇ ಸಂದರ್ಭದಲ್ಲಿ ಆತನ ಟೀಚರ್ ತಿಂಗಳಿಗಾಗುವಷ್ಟು ಹೋಂ ವರ್ಕ್ ನೀಡಿದ್ದರು.
ಅದೆಲ್ಲವನ್ನೂ ಕಂಪ್ಲೀಟ್ ಮಾಡಿದ್ದ ಪವನ್, ಟೀಚರ್ ಬಳಿ ತೆರಳು ಹಠ ಹಿಡಿದಿದ್ದ. ಆತನ ಮನದಾಸೆ ಪೂರೈಸಲು ವಿದ್ಯಾರ್ಥಿಯ ತಾಯಿ 35 ಕಿಲೋ ಮೀಟರ್ ಪಯಣಿಸಿ ಟೀಚರ್ಗೆ ಭೇಟಿ ಮಾಡಿಸಲು ಕರೆತಂದಿದ್ದರು. ವಿದ್ಯಾರ್ಥಿಯ ವಿದ್ಯಾಸಕ್ತಿಗೆ ಟೀಚರ್ ಹೃದಯತುಂಬ ಕೊಂಡಾಡಿದರು.
ಆನ್ಲೈನ್ ಕ್ಲಾಸ್ ಸೌಲಭ್ಯವಿಲ್ಲದೇ ಪರದಾಡಿದ ವಿದ್ಯಾರ್ಥಿ ಪವನ್: ವಿದ್ಯಾರ್ಥಿಯಲ್ಲಿನ ಕಲಿಕೆ ಆಸಕ್ತಿ ಕಂಡು ಟೀಚರ್ ವಿದ್ಯಾರ್ಥಿಗೆ ನೋಟ್ಬುಕ್, ಪುಸ್ತಕ ಸೇರಿದಂತೆ ಮತ್ತಿತರ ಪರಿಕರಣಗಳನ್ನು ನೀಡಿ ಧೈರ್ಯ ತುಂಬಿ ಕಳುಹಿಸಿದರು.
ವಿದ್ಯಾರ್ಥಿಯಲ್ಲಿನ ಕಲಿಕೆಯ ಉತ್ಸಾಹ ಕಂಡು ಟೀಚರ್ ಮಾಡಿದ್ದ ಕ್ರಮ ನಿಜಕ್ಕೂ ಪ್ರಶಂಸನಾರ್ಹವೇ ಸರಿ. ಆದರೆ, ಕರೋನಾದಂತಹ ಇಂತಹ ಸಂಕಷ್ಟದ ಸಂದರ್ಭದಲ್ಲಿ ಆನ್ಲೈನ್ ಕ್ಲಾಸ್ ಅಥವಾ ಮತ್ತಿತರ ರೀತಿಯ ಕಲೆ ಅನಿವಾರ್ಯವೇ ಎಂಬ ಪ್ರಶ್ನೆ ಪಾಲಕರಲ್ಲಿ ಹುಟ್ಟು ಹಾಕಿದೆ. ಕರೋನಾ ಸಂಕಷ್ಟ ಎದುರಾದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜಾನ್ ಹೈ ತೋಥೋ ಜಹಾನ್ ಹೈ ಎಂದು ಸಾರಿ ಲಾಕ್ಡೌನ್ ಮಂತ್ರಕ್ಕೆ ಶರಣಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೋಂ ವರ್ಕ್ ನೀಡುವ ಅವಶ್ಯಕತೆ ಇತ್ತಾ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಇದಕ್ಕೆ ಶಿಕ್ಷಣ ಸಚಿವ ಸುರೇಶ ಕುಮಾರ ಅವರೇ ಉತ್ತರಿಸಬೇಕು.