- ಸ್ಟಾರ್ ಏರ್ ಕಂಪನಿಯಿಂದ ಜ.1ಕ್ಕೆ ಆರಂಭ
- ಮುಂಗಡ ಟಿಕೆಟ್ ಬುಕ್ಕಿಂಗ್ ಅವಕಾಶ
ಹುಬ್ಬಳ್ಳಿ: ತಿರುಪತಿ ದೇವರ ದರ್ಶನ ಪಡೆಯಲು ವಿಮಾನದಲ್ಲಿ ಹೋಗುವ ಉತ್ತರ ಕರ್ನಾಟಕ ಭಾಗದ ಜನರ ಕನಸು ನನಸಾಗಲಿದ್ದು, ಜನವರಿ 1ರಿಂದ ಹುಬ್ಬಳ್ಳಿ-ತಿರುಪತಿ ವಿಮಾನ ಸೇವೆ ಆರಂಭವಾಗಲಿದೆ.
ಸ್ಟಾರ್ ಏರ್ ಕಂಪನಿ ಹುಬ್ಬಳ್ಳಿ-ತಿರುಪತಿ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ. ಗುರುವಾರ ಹೊರತುಪಡಿಸಿ ವಾರದ ಉಳಿದ ದಿನ ಹುಬ್ಬಳ್ಳಿಯಿಂದ ತಿರುಪತಿಗೆ ವಿಮಾನ ಹಾರಾಟ ನಡೆಸಲಿದೆ. ಬೆಳಗ್ಗೆ 11.55ಕ್ಕೆ ತಿರುಪತಿಯಿಂದ ಹೊರಡುವ ವಿಮಾನ 1 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿಯಿಂದ 1.25ಕ್ಕೆ ಹೊರಡುವ ವಿಮಾನ 2.30ಕ್ಕೆ ತಿರುಪತಿಗೆ ತಲುಪಲಿದೆ. ಸ್ಟಾರ್ ಏರ್ ಹುಬ್ಬಳ್ಳಿ-ತಿರುಪತಿ ವಿಮಾನ ಸಂಚಾರ ಆರಂಭಿಸುವುದಾಗಿ ಹಿಂದೆಯೇ ಘೋಷಣೆ ಮಾಡಿತ್ತು. ಆದರೆ, ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ವಿಳಂಬವಾಗಿ ಸೇವೆ ಆರಂಭವಾಗಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ.
ಕರ್ನಾಟಕದಲ್ಲಿನ ದೊಡ್ಡ ವಿಮಾನ ನಿಲ್ದಾಣಗಳ ಪೈಕಿ ಹುಬ್ಬಳ್ಳಿಗೆ ಮೂರನೇ ಸ್ಥಾನವಿದೆ. 2020ರ ಏಪ್ರಿಲ್ನಿಂದ ಅಕ್ಟೋಬರ್ ತನಕ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.ವಿಮಾನ ನಿಲ್ದಾಣ ಪ್ರಾಧಿಕಾರದ ಮಾಹಿತಿಯಂತೆ ಏಪ್ರಿಲ್ನಿಂದ ಅಕ್ಟೋಬರ್ ತನಕ 17,689 ಪ್ರಯಾಣಿಕರು ಆಗಮಿಸಿದ್ದಾರೆ. 484 ವಿಮಾನಗಳು ಹಾರಾಟ ನಡೆಸಿವೆ. ಅಕ್ಟೋಬರ್ ತಿಂಗಳಿನಲ್ಲಿ 8,615 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಅಕ್ಟೋಬರ್ನಲ್ಲಿ 207 ವಿಮಾನ ಹಾರಾಟ ನಡೆಸಿದೆ.